ಸೋಮವಾರಪೇಟೆ, ಅ. 2: ಭಯಾನಕ ಭೂ ಕುಸಿತಕ್ಕೆ ಒಳಗಾಗಿ ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿರುವ ಮಡಿಕೇರಿ ತಾಲೂಕು, ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೆಮ್ಮೆತ್ತಾಳು ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ಹಾಸನ, ಅರಸೀಕೆರೆಯ ಜಾವಗಲ್‍ನ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಹೆಮ್ಮೆತ್ತಾಳು ಗ್ರಾಮದಲ್ಲಿ ಬಹುತೇಕ ಮನೆಗಳು ಭೂಕುಸಿತಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಹಲವಷ್ಟು ಮಂದಿ ಪರಿಹಾರ ಕೇಂದ್ರ, ಸಂಬಂಧಿಕರು ಮತ್ತು ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಇಂತಹ ಕುಟುಂಬದವರಿಗೆ ತಲಾ 25 ಕೆ.ಜಿ. ಅಕ್ಕಿ ಸೇರಿದಂತೆ, ಅಡುಗೆ ಎಣ್ಣೆ, ಸಕ್ಕರೆ, ಸಾಂಬಾರ್ ಪೌಡರ್, ಔಷಧಿಗಳು, ಬೇಳೆ, ಗೋಧಿ ಹಿಟ್ಟು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಗ್ರಾಮಸ್ಥರಾದ ಕುಡೆಕಲ್ ಸಂತೋಷ್ ಅವರ ಸಮ್ಮುಖದಲ್ಲಿ ನೀಡಲಾಯಿತು.
ಜಾವಗಲ್ ಮಾಡೆಲ್ ಶಾಲೆಯ ಕಾರ್ಯದರ್ಶಿ ಡಾ. ವಿನಾಯಕ್, ಡಾ. ಹರ್ಷ, ಪ್ರಸನ್ನಕುಮಾರ್, ವಿನೋದ, ವಿನುತ, ಕೃಷ್ಣಮೂರ್ತಿ, ವಸಂತಾಚಾರ್, ಪ್ರದೀಪ್, ಜಯಸಿಂಹ, ಹೈಮಾಸ್ಟರ್ ತಂಡದ ವೀರೇಶ್ ದಾವಣಗೆರೆ, ಚಿಕ್ಕ ಮಗಳೂರಿನ ಶಂಕರ್, ಶನಿವಾರಸಂತೆ ಸುಪ್ರಜ ಗುರುಕುಲದ ಸುಜಲಾದೇವಿ ಅವರುಗಳು ಉಪಸ್ಥಿತರಿದ್ದು, ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.