ನಾಪೋಕ್ಲು, ಅ. 2: ಇಲ್ಲಿಗೆ ಸಮೀಪದ ಹೊದವಾಡ ಗ್ರಾಮದ ರಾಫೆಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಅಂತರಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಸಂಪಾಜೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಜಯಗಳಿಸಿ ಜಿಲ್ಲಾ ಹಂತಕ್ಕೆ ಪ್ರವೇಶಿಸಿತು. ಬಾಲಕಿಯರ ವಿಭಾಗದಲ್ಲಿ ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಗೆಲವು ಪಡೆಯಿತು.
ಬಾಲಕರ ವಿಭಾಗದ ಟೂರ್ನಿ ಯಲ್ಲಿ ತಾಲೂಕಿನ ವಿವಿಧ ಕಾಲೇಜುಗಳ ಹತ್ತು ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಸ್ಪರ್ಧೆ ಸಂಪಾಜೆ ಪದವಿಪೂರ್ವ ಕಾಲೇಜು ಹಾಗೂ ಮಡಿಕೇರಿಯ ರಾಜ ರಾಜೇಶ್ವರಿ ಕಾಲೇಜಿನ ತಂಡಗಳ ನಡುವೆ ನಡೆಯಿತು. ಸಂಪಾಜೆ ತಂಡ ಪ್ರಶಸ್ತಿ ಪಡೆದು ಜಿಲ್ಲಾ ಹಂತ ಪ್ರವೇಶಿಸಿದರೆ ರಾಜರಾಜೇಶ್ವರಿ ಕಾಲೇಜಿನ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಚೇರಂಬಾಣೆ ಪದವಿಪೂರ್ವ ಕಾಲೇಜಿನ ತಂಡಗಳ ನಡುವೆ ನಡೆಯಿತು. ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಗೆಲವು ಸಾಧಿಸಿ ಜಿಲ್ಲಾ ಹಂತಕ್ಕೆ ಅರ್ಹತೆ ಪಡೆದುಕೊಂಡರೆ ಚೇರಂಬಾಣೆ ಕಾಲೇಜಿನ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಟೂರ್ನಿಯ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಕಿರಣ್ ಗಣೇಶ್, ಅನಿಲ್ ಮತ್ತು ವಿಕ್ರಮ್ ಪಾಲ್ಗೊಂಡಿದ್ದರು. ರಾಫೆಲ್ಸ್ ಕಾಲೇಜಿನ ಪ್ರಾಂಶುಪಾಲ ಮುಜೀಬ್, ನಿರ್ದೇಶಕ ಮೆಹಬೂಬ್ ಸಾಬ್ ಮತ್ತಿತರರು ಇದ್ದರು.