ಸೋಮವಾರಪೇಟೆ, ಅ. 2: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಕನಸು ಗ್ರಾಮ ಸ್ವರಾಜ್ಯ. ಗ್ರಾಮಗಳ ಉದ್ದಾರದಿಂದ ದೇಶದ ಉದ್ದಾರ ಎಂಬ ನಂಬಿಕೆ ಮಹಾತ್ಮರಲ್ಲಿತ್ತು. ಇದೇ ಗ್ರಾಮಗಳ ವ್ಯಾಖ್ಯಾನಕ್ಕೆ ಒಳಪಡುವ ಹಾಡಿಗಳ ದುಸ್ಥಿತಿ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇಂದಿಗೂ ಬದ ಲಾಗಿಲ್ಲ ಎಂಬದು ಕುಚೋದ್ಯ ವಾದರೂ ವಾಸ್ತವ. ಗಿರಿಜನರ ಅಭ್ಯುದಯಕ್ಕೆಂದು ಸೋಗಲಾಡಿತನದ ವೇಷ ಧರಿಸುವ ರಾಜಕಾರಣಿಗಳು, ಮುಖಂಡರು ಗಳಿಂದ ಹಿಡಿದು, ಅದೇ ಇಲಾಖೆಯಲ್ಲಿ ವೃತ್ತಿ ನಿರ್ವಹಿಸುತ್ತಾ ಸಂಬಳ ಪಡೆಯುವ ಅಧಿಕಾರಿ ವರ್ಗದ ಕರ್ತವ್ಯ ನಿಷ್ಠೆಗೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ಕಿಬ್ಬೆಟ್ಟ ಗಿರಿಜನರ ಹಾಡಿಯೇ ಸಾಕ್ಷಿ.

ಜನಪ್ರತಿನಿಧಿಗಳ ಅಸಡ್ಡೆ ಹಾಗೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಇಲ್ಲಿನ ಗಿರಿಜನರು ವಿದ್ಯುತ್ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಂಗಳ ಗ್ರಹಕ್ಕೆ ಮಾನವ ಕಾಲಿಟ್ಟರೂ ಇಲ್ಲಿನ ಗಿರಿಜನರು ಇಂದಿಗೂ ವಿದ್ಯುತ್ ಕಾಣದೇ ಕತ್ತಲೆಯ ಕೂಪದಲ್ಲಿಯೇ ಇದ್ದಾರೆ. ಇವರ ಬದುಕೂ ಸಹ ಶೋಚನಿಯವಾಗಿದೆ.

ಕಂಬ ಹಾಕಿದ್ದೇ ಸಾಧನೆ: ಕಳೆದ ಹದಿನೈದು ವರ್ಷಗಳ ಹಿಂದೆ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲೆಂದು ಕೆಲವಾರು ಕಂಬಗಳನ್ನು ನೆಟ್ಟು, ವಿದ್ಯುತ್ ತಂತಿಗಳನ್ನು ಎಳೆಯಲಾಗಿದೆ. ಆದರೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಮಾತ್ರ ಇಚ್ಚಾಶಕ್ತಿ ಪ್ರದರ್ಶಿಸಿಲ್ಲ. ಈ ಬಗ್ಗೆ ಅನೇಕ ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಮಾತ್ರ ಶೂನ್ಯ.

ಚುನಾವಣೆ ಸಂದರ್ಭ ವಿದ್ಯುತ್: ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲೆ, ವಿಧಾನ ಸಭೆ, ಲೋಕಸಭಾ ಚುನಾವಣೆಯಲ್ಲಿ ಮಾತ್ರ ರಾಜಕೀಯ ಪಕ್ಷದವರಿಗೆ ಕಿಬ್ಬೆಟ್ಟ ಹಾಡಿಯ ಗಿರಿಜನರು ನೆನಪಾಗುತ್ತಾರೆ. ಪ್ರತಿ ಚುನಾವಣೆ ಸಂದರ್ಭ ಮತ ಕೇಳುವ ಮಂದಿ ನಮ್ಮನ್ನೆ ಗೆಲ್ಲಿಸಿದರೆ ಕರೆಂಟ್ ಹಾಕಿಸಿ ಕೊಡುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರೆ. ಅಂತಹ ಚುನಾವಣೆಗಳು ಹತ್ತಾರು ಕಳೆದಿವೆ. ಗುರುತಿನ ಚೀಟಿ ಹಿಡಿದು ಮತದಾನವನ್ನೂ ಮಾಡಿದ್ದೇವೆ ಆದರೆ ಇದುವರೆಗೆ ವಿದ್ಯುತ್ ಮಾತ್ರ ಬಂದಿಲ್ಲ ಎಂದು ಹಾಡಿಯಲ್ಲಿರುವ ಗಿರಿಜನರ ನಾಗಿ, ಬೋಜಮ್ಮ, ರಮೇಶ್, ಲೋಕೇಶ್ ಅವರುಗಳು ವಾಸ್ತವತೆಯನ್ನು ಬಿಚ್ಚಿಟ್ಟಿದ್ದಾರೆ.

ದಾಖಲೆಗಳಿಲ್ಲ: ನಾಲ್ಕು ಎಕರೆ ಜಾಗದಲ್ಲಿರುವ ಕಿಬ್ಬೆಟ್ಟ ಹಾಡಿಯಲ್ಲಿ 10 ಮನೆಗಳಿದ್ದು, 15 ಕುಟುಂಬಗಳು ವಾಸಿಸುತ್ತಿವೆ. ಅವಿದ್ಯಾವಂತರಾಗಿರುವ ಗಿರಿಜನರು ತಮ್ಮ ಜಾಗಕ್ಕೆ ಹಕ್ಕುಪತ್ರಗಳನ್ನು ಪಡೆದುಕೊಂಡಿಲ್ಲ. ಹಕ್ಕುಪತ್ರಗಳನ್ನು ಕೊಡಿಸಲು ಚೌಡ್ಲು ಗ್ರಾಮ ಪಂಚಾಯಿತಿ ಆಗಲಿ, ಸಮಾಜ ಕಲ್ಯಾಣ ಇಲಾಖೆಯಾಗಲಿ ಪ್ರಯತ್ನ ಮಾಡಿಲ್ಲ. ಹಕ್ಕುಪತ್ರಗಳಿಲ್ಲದ ಕಾರಣ ಸರ್ಕಾರದ ಅನೇಕ ಸೌಲಭ್ಯಗಳು ಗಿರಿಜನರ ಕುಟುಂಬಗಳಿಗೆ ಸಿಗುತ್ತಿಲ್ಲ.

ಹಾಡಿಯ ರವಿ ಮತ್ತು ಮುತ್ತ ಅವರುಗಳಿಗೆ ಮಾತ್ರ ಬಿಪಿಎಲ್ ಕಾರ್ಡ್‍ಗಳಿದ್ದು, ಉಳಿದ 13 ಕುಟುಂಬಗಳಿಗೆ ಪಡಿತರ ಚೀಟಿಗಳಿಲ್ಲ. ಬಿಪಿಎಲ್ ಕಾರ್ಡ್ ಇಲ್ಲದಿರುವ ದರಿಂದ ಅನ್ನಭಾಗ್ಯದ ಅಕ್ಕಿ ಸಿಗುತ್ತಿಲ್ಲ. ಇದರೊಂದಿಗೆ ಗಿರಿಜನರಿಗೆ ಕೂಲಿ ಕೆಲಸವೂ ಸಿಗುತ್ತಿಲ್ಲ. ಅತಿವೃಷ್ಟಿಗೆ ಕಾಫಿ, ಕಾಳುಮೆಣಸು ಸೇರಿದಂತೆ ಇತರ ಬೆಳೆಗಳು ಹಾನಿಯಾಗಿರುವದರಿಂದ ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ. ಕೂಲಿ ಇಲ್ಲದಿದ್ದರೆ ಉಪವಾಸವೇ ಗತಿ

ಸೋಲಾರ್ ದೀಪ ವಿತರಣೆ

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಕಿಬ್ಬೆಟ್ಟ ಗ್ರಾಮದ ಗಿರಿಜನರ ಹಾಡಿಯ ನಿವಾಸಿಗಳಿಗೆ ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಉಚಿತ ಸೋಲಾರ್ ದೀಪಗಳನ್ನು ವಿತರಿಸಲಾಯಿತು.

ಕಳೆದ 10 ವರ್ಷಗಳಿಂದ ವಿದ್ಯುತ್ ಸೌಕರ್ಯವಿಲ್ಲದೆ ತೊಂದರೆಗೊಳಗಾಗಿದ್ದ ಸುಮಾರು 15 ಕುಟುಂಬಗಳಿಗೆ ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಡುವ ಹಿನ್ನೆಲೆ ರೋಟರಿ ಅಧ್ಯಕ್ಷ ಪಿ.ಕೆ. ರವಿ ಸೋಲಾರ್ ದೀಪಗಳನ್ನು ವಿತರಿಸಿದರು.

ರೋಟರಿ ಸಂಸ್ಥೆಯ ಪದಾಧಿಕಾರಿ ಎ.ಎಸ್. ಮಲ್ಲೇಶ್ ಶುಚಿತ್ವದ ಕುರಿತು ಹಾಡಿಯ ನಿವಾಸಿಗಳಿಗೆ ಅಗತ್ಯ ಮಾಹಿತಿ ನೀಡಿದರು. ಈ ಸಂದರ್ಭ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಇಂದೂಧರ್ ಅವರು ಹಾಡಿಯ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಮೂವರಿಗೆ ಜಾಂಡೀಸ್, ಎಂಟು ಮಂದಿಗೆ ರಕ್ತ ಹೀನತೆ ಕಾಯಿಲೆ ಇರುವ ಕುರಿತು ಕಂಡು ಬಂತು. ನಂತರ ಆರೋಗ್ಯದ ಕುರಿತು ಹೆಚ್ಚಿನ ಮುತುವರ್ಜಿ ವಹಿಸುವಂತೆ ವೈದ್ಯಾಧಿಕಾರಿ ಮಾಹಿತಿ ನೀಡಿದರು. ಅಲ್ಲದೇ ಗುರುವಾರದಂದು ಗೌಡಳ್ಳಿಯ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ಬರುವಂತೆ ಸೂಚಿಸಿದರು. ರೋಟರಿ ಕಾರ್ಯದರ್ಶಿ ಪಿ. ನಾಗೇಶ್, ಪದಾಧಿಕಾರಿಗಳಾದ ಬಿದ್ದಪ್ಪ, ಬಿ.ಎಂ. ದಿನೇಶ್, ಬಿ.ಎಸ್. ಸುಂದರ್, ಯಶವಂತ್, ರೋಟರಿ ಸದಸ್ಯರಾದ ಪೂಜಾ, ಪ್ರಜ್ಞಾ, ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಮತ್ತಿತರರು ಉಪಸ್ಥಿತರಿದ್ದರು.