ಮಡಿಕೇರಿ, ಅ. 1: ಹಿರಿಯ ನಾಗರಿಕರಿಗೆ ಅನೇಕ ಕಾನೂನು, ಕಾಯ್ದೆಗಳಿವೆ, ಆದರೂ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಎಲ್ಲರೊಂದಿಗೂ ಒಟ್ಟುಗೂಡಿ ಉತ್ತಮ ಬದುಕು ನಡೆಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಸಲಹೆ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಮಡಿಕೇರಿ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿರಿಯರಿಗೆ ಗೌರವ ನೀಡುವದರ ಜೊತೆಗೆ ಸಲಹೆ ಮಾರ್ಗದರ್ಶನ ಪಡೆದು ಯುವ ಜನರು ಮುನ್ನಡೆಯ ಬೇಕು ಎಂದು ಅವರು ಸಲಹೆ ಮಾಡಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಮಾತನಾಡಿ ಹಿರಿಯರು ಕಿರಿಯರನ್ನು ಮತ್ತು ಕಿರಿಯರು ಹಿರಿಯರನ್ನು ಗೌರವಿಸುವಂತಾದರೆ ಕುಟುಂಬದಲ್ಲಿ ಅನ್ಯೋನ್ಯ ಜೀವನ ಕಾಣಬಹುದು.

ಕುಟುಂಬ ನಿರ್ವಹಣೆಯಲ್ಲಿ ಹಿರಿಯರ ಪಾತ್ರ ಮಹತ್ತರವಾಗಿದೆ. ಯಾವದೇ ಸಮಸ್ಯೆಯನ್ನು ನಿಭಾಯಿಸಲು ಹಿರಿಯರ ಸಹಕಾರ ಮತ್ತು ಮಾರ್ಗದರ್ಶನ ಯುವಕರಿಗೆ ಅತ್ಯಗತ್ಯ ಎಂದು ಅವರು ಹೇಳಿದರು.

ವಕೀಲ ಮನೋಜ್ ಬೋಪಯ್ಯ ಮಾತನಾಡಿ ಹಿರಿಯರು ಅಪಾರ ಜ್ಞಾನ ಹಾಗೂ ಅನುಭವ ಹೊಂದಿದ್ದಾರೆ. ಹಿರಿಯರು ಸಮಾಜದ ಆಸ್ತಿಯಾಗಿದ್ದು ಯುವಜನರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಜೊತೆಗೆ ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದು ಜೀವನ ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಗರಸಭಾ ಸದಸ್ಯ ಪೀಟರ್ ಮಾತನಾಡಿ ಹಿರಿಯರ ಸೇವೆ ನಮ್ಮೆಲ್ಲರ ಕರ್ತವ್ಯವಾಗಿದೆ. ಹಿರಿಯರಿಗೆ ನೀಡುವ ಮಾಸಾಶನ ಹೆಚ್ಚಳ ಮಾಡಬೇಕು ಎಂದು ಸಲಹೆ ಮಾಡಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಬಿ.ಪಿ. ದೇವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ತಿಮ್ಮಯ್ಯ, ಹಿರಿಯರಾದ ಚಂಗಪ್ಪ, ತರಬೇತಿ ನ್ಯಾಯಾಧೀಶ ಮಲ್ಲಿಕಾರ್ಜುನ, ಮಹಾಲಕ್ಷ್ಮಿ ಇತರರು ಇದ್ದರು. ಸಾಹಿತ್ಯ, ನಾಟಿವೈದ್ಯ, ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹಿರಿಯರನ್ನು ಸನ್ಮಾನಿಸಲಾಯಿತು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿ, ವಂದಿಸಿದರು.