ಸೋಮವಾರಪೇಟೆ, ಅ. 1: ರೈತರಿಗೆ ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಿದರೆ ಕೃಷಿ ಕ್ಷೇತ್ರ ಉಳಿಯುತ್ತದೆ. ಹಾಗಾದಾಗ ರೈತರು ಸರ್ಕಾರದ ಸಾಲಮನ್ನಾಕ್ಕೆ ಕೈ ಚಾಚುವದಿಲ್ಲ. ಒಂದು ಬೆಂಕಿ ಪೊಟ್ಟಣಕ್ಕೆ ಒಂದು ರೂ. ಬೆಲೆ ನಿಗದಿಯಿದೆ. ರೈತರು ಬೆಳೆದ ಬೆಳೆಗಳಿಗೆ ಯಾವದೇ ನಿಗದಿತ ಬೆಲೆ ಇಲ್ಲ. ಈ ಬಗ್ಗೆ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ರಾಜ್ಯ ರೈತ ಸಂಘದ ಹಾಸನ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಭಿಪ್ರಾಯಿಸಿದರು.

ತಾಲೂಕು ರೈತ ಸಂಘದ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಸಾಕಷ್ಟು ರೈತರು ಸಂತ್ರಸ್ತರಾಗಿದ್ದರೂ ಸರ್ಕಾರ ನಿರೀಕ್ಷಿತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸಾಲಮನ್ನಾ ಮಾಡುವದಾಗಿ ಸರ್ಕಾರ ಹೇಳುತ್ತಿದ್ದರೂ, ಬ್ಯಾಂಕ್ ಗಳಿಂದ ರೈತರಿಗೆ ನೋಟೀಸ್ ತಪ್ಪುತ್ತಿಲ್ಲ. ರೈತರು ಸಂಘಟಿತ ರಾಗದಿದ್ದರೆ ಯಾವದೇ ಸವಲತ್ತು ಪಡೆಯಲು ಸಾಧ್ಯವಿಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳು ರೈತರ ನೆರವಿಗೆ ಧಾವಿಸಬೇಕು. ಬಲ ಹೊಂದಿರುವ ರೈತರುಗಳು ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಣ್ಣ ರೈತರು ಇವುಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆ ರೈತರು ಇನ್ನಷ್ಟು ಸಂಘಟಿತ ರಾಗಬೇಕು ಎಂದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ ಮಾತನಾಡಿ, ಕೊಡಗನ್ನು ಪುನರ್ ನಿರ್ಮಿಸಲು ಪಣತೊಡಬೇಕಿದ್ದ ರಾಜ್ಯ ಸರ್ಕಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇವಾಲಯ ಗಳನ್ನು ಸುತ್ತುವ ಬದಲು ರೈತರ ಹಿಂದೆ ಸುತ್ತಬೇಕಿದೆ. ಸರ್ಕಾರದಿಂದ ಕೊಡಗಿಗೆ ಹೆಚ್ಚಿನ ಪರಿಹಾರ ಒದಗಿಸಬೇಕಿದೆ ಎಂದು ಅಭಿಪ್ರಾಯಿಸಿದರು.

ಸಭೆಯಲ್ಲಿದ್ದ ಕರ್ನಾಟಕ ಪರಿಶಿಷ್ಟ ಜಾತಿ,ವರ್ಗಗಳ ಸಂಘಟನಾ ಸಮಿತಿ ಅಧ್ಯಕ್ಷ ಎಂ.ಪಿ. ಹೊನ್ನಪ್ಪ ಮಾತನಾಡಿ, ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವ ಮೂಲಕ, ಹೊಸ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ಸಂತ್ರಸ್ತ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗುತ್ತಿಲ್ಲ. ಕೃಷಿ ಭೂಮಿ ಕಳೆದುಕೊಂಡವರಿಗೆ ಸರ್ಕಾರ ತಕ್ಷಣ ಕೃಷಿ ಭೂಮಿ ಒದಗಿಸಿಕೊಡಬೇಕು ಎಂದರಲ್ಲದೇ, ಸಾಲಮನ್ನಾದ ಪ್ರಯೋಜನ ಕೊಡಗಿನ ಬಹುತೇಕ ರೈತರಿಗೆ ಲಭಿಸುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ದಕ್ಷತೆ ತೋರುತ್ತಿಲ್ಲ. ತಾಲೂಕು ಕಚೇರಿಯಲ್ಲಿ ರೈತರ ಕೆಲಸಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ರವಿ ಉಪಸ್ಥಿತರಿದ್ದರು.