ವರದಿ-ಚಂದ್ರಮೋಹನ್

ಕುಶಾಲನಗರ, ಅ. 1: ಪ್ರಾಕೃತಿಕ ವಿಕೋಪದಿಂದ ಗ್ರಾಮೀಣ ಪ್ರದೇಶದ ಕೆಲವೆಡೆ ಜನರು ಇನ್ನೂ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ದೃಶ್ಯ ಗೋಚರಿಸಿದೆ.

ಮಾದಾಪುರದ ಗ್ರಾಪಂ ವ್ಯಾಪ್ತಿಯ ಕಾಂಡನಕೊಲ್ಲಿ, ಕಡಂದಾಳು ಗ್ರಾಮದಲ್ಲಿ ವೃದ್ದರೊಬ್ಬರು ಆತಂಕದೊಂದಿಗೆ ದಿನದೂಡುತ್ತಿರುವ ದೃಶ್ಯ ಕಾಣಬಹುದು. ಕಾಡಂಚಿನ ಭಾಗದಲ್ಲಿ ನೆಲೆಸಿರುವ ಕೃಷಿಕ ಎಂ.ಬಿ.ಬೋಪಯ್ಯ ಎಂಬವರ ಮನೆಗೆ ಆಗಸ್ಟ್ 15 ರಂದು ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು ಮನೆಗೆ ತೀವ್ರ ಹಾನಿಯಾಗಿದೆ.

ಈ ಸಂದರ್ಭ ವೃದ್ದ ಬೋಪಯ್ಯ ಅಸ್ವಸ್ಥ ಸ್ಥಿತಿಯಲ್ಲಿರುವ ತನ್ನ ಪುತ್ರನೊಂದಿಗೆ ಸಾಂತ್ವನ ಕೇಂದ್ರದಲ್ಲಿ ಕೆಲವು ದಿನಗಳು ಆಶ್ರಯ ಪಡೆದು ನಂತರ ತನ್ನ ಮನೆಗೆ ಹಿಂತಿರುಗಿದ್ದಾರೆ. ಮನೆಯ ಮೇಲ್ಚಾವಣಿಗೆ ಬಿದ್ದಿರುವ ಮರವನ್ನು ತೆರವುಗೊಳಿಸಲು ಯಾರೂ ಮುಂದಾಗದಿರುವ ಕಾರಣ ಅಪಾಯದ ನಡುವೆ ಬೋಪಯ್ಯ ನೆಲೆಸಿರುವದು ಕಂಡುಬಂದಿದೆ. ಅಂಗವೈಕಲ್ಯ ಪುತ್ರನ ಆರೋಗ್ಯದ ಬಗ್ಗೆ ಕೂಡ ವೃದ್ಧ ಬೋಪಯ್ಯ ಕಾಳಜಿ ವಹಿಸುತ್ತಿರುವ ದೃಶ್ಯ ಮನಕಲಕುವಂತಿದೆ.

ಕೊಡಗು ಸಂಸ್ಥೆಯ ಕಾರ್ಯಕರ್ತರು ಬೋಪಯ್ಯ ಮನೆಗೆ ತೆರಳಿ ಕಂಬಳಿ ಮತ್ತಿತರ ಸಾಮಗ್ರಿ ಮತ್ತು ಧನಸಹಾಯ ನೀಡಿ ಸಹಕರಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ತೆರಳಿದ್ದು ಮನೆ ಮೇಲೆ ಬಿದ್ದಿರುವ ಮರವನ್ನು ತೆರವುಗೊಳಿಸುವಲ್ಲಿ ಮಾತ್ರ ವಿಳಂಭ ಧೋರಣೆ ಅನುಸರಿಸುತ್ತಿರುವದು ಸರಿಯಲ್ಲ ಎಂದು ಸಂಸ್ಥೆಯ ಮುಖ್ಯಸ್ಥ ಎಂ.ಆರ್. ನೌಶಾದ್ ಆಕ್ರೋಶÀ ವ್ಯಕ್ತಪಡಿಸಿದ್ದಾರೆ. ಕಳೆದ 3 ವಾರಗಳಿಂದ ಬೋಪಯ್ಯ ಅವರು ತನ್ನ ವಿಕಲಚೇತನ ಪುತ್ರನೊಂದಿಗೆ ಅಪಾಯದ ಸ್ಥಿತಿಯಲ್ಲಿ ಭಯದಲ್ಲೇ ಮನೆಯೊಳಗೆ ನೆಲೆಸಿದ್ದು ತಕ್ಷಣ ಸಹಾಯಹಸ್ತ ಚಾಚಬೇಕಾಗಿದೆ ಎನ್ನುವದು ಸ್ಥಳೀಯರ ಆಗ್ರಹವಾಗಿದೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಮಹೇಶ್, ಮನೆಯ ಮೇಲೆ ಬಿದ್ದಿರುವ ಮರ ತೆರವುಗೊಳಿಸಲು ಕೂಡಲೆ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ.