ಮಡಿಕೇರಿ, ಅ. 2: ಗ್ರೀನ್ ಸಿಟಿ ಫೋರಂ ಸಂಘಟನೆ ಆಶ್ರಯದಲ್ಲಿ ಮಂಗಳವಾರ ನಡೆದ ಮಡಿಕೇರಿ ಕೋಟೆ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಸಾಧನೆ ಗೈದಿರುವ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು.
ಕೋಟೆ ಹಳೆಯ ವಿಧಾನ ಸಭಾಂಗಣದಲ್ಲಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು. ಎರಡು ದಶಕದಿಂದ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಗರಸಭೆ ಮಾಜಿ ಸದಸ್ಯ ಮೋಂತಿ ಗಣೇಶ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಮುಖ್ಯಸ್ಥ ಮೇಜರ್ ಬಿ. ರಾಘವ, ಮನೆ ಆವರಣ ಸ್ವಚ್ಛವಾಗಿಟ್ಟುಕೊಂಡಿರುವ ನ್ಯಾಯಾಂಗ ಇಲಾಖೆ ನೌಕರ ಕುಡಿಯರ ಕೆ. ಬೋಪಯ್ಯ, ಸೇವಾ ಮನೋಭಾವ ಹೊಂದಿರುವ ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಅವರನ್ನು ಸನ್ಮಾನಿಸಲಾಯಿತು.
ನನಗೆ ಮಾಡಿರುವ ಸನ್ಮಾನ ನನ್ನ ಎನ್ಸಿಸಿ ಕೆಡೆಟ್ಗಳಿಗೆ ಸಲ್ಲುತ್ತದೆ. ಇನ್ನೊಬ್ಬರಿಗಾಗಿ ಬದುಕುವವರ ನೆನಪು ಸದಾ ಇರುತ್ತದೆ ಎಂದು ಮೇಜರ್ ಬಿ. ರಾಘವ ಹೇಳಿದರು. ಮಂಗಳಾದೇವಿನಗರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲಾಗು ವದೆಂದು ಕುಡಿಯರ ಕೆ. ಬೋಪಯ್ಯ ಹೇಳಿದರು. ಒಳ್ಳೆಯ, ಪ್ರಾಮಾಣಿಕ, ಆರೋಗ್ಯ ಪೂರ್ಣ ವ್ಯಕ್ತಿಗಳ ಅಗತ್ಯತೆ ಸಮಾಜಕ್ಕಿದೆ ಎಂದು ನಗರಸಭೆ ಮಾಜಿ ಸದಸ್ಯೆ ಮೋಂತಿ ಗಣೇಶ್ ಹೇಳಿದರು. ಗ್ರೀನ್ ಸಿಟಿ ಫೋರಂ ಮೂಲಕ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಹೇಳಿದರು. ಕ್ರೀಡೆ, ಸೇನೆ, ಪರಿಸರದ ಮೂಲಕ ಪ್ರಖ್ಯಾತಿ ಹೊಂದಿರುವ ಕೊಡಗು ಜಿಲ್ಲೆ ಸ್ವಚ್ಛತೆಗಾಗಿಯೂ ಪ್ರಖ್ಯಾತಿ ಹೊಂದಬೇಕೆಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಒಂದು ದಿನ ನಾನು ಕೂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಮಡಿಕೇರಿ ಕೋಟೆ ಸ್ವಚ್ಛ ಮಾಡಲು ಇವರಿಂದ ಸಾಧ್ಯವಿಲ್ಲ ಎಂದು ಯೋಚಿಸಿದ್ದೇ. ಆದರೆ, ಗ್ರೀನ್ ಸಿಟಿ ಫೋರಂ ಅತ್ಯುತ್ತಮವಾದ ಕಾರ್ಯ ಮಾಡುವದರ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತ್ಕುಮಾರ್ ಮಿಶ್ರಾ ಹೇಳಿದರು.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಒಳ್ಳೆಯ ಕೆಲಸ ಮಾಡಬಹುದೆಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಹೇಳಿದರು. ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷ ದಾಮೋದರ್, ಉಪನ್ಯಾಸಕ ಸಿದ್ದರಾಜು, ವರ್ತಕ ಅರುಣ್ ಮತ್ತಿತರರಿದ್ದರು. ಸವಿತಾ ಭಟ್ ನಿರೂಪಿಸಿದರು. ಅಂಬೆಕಲ್ ನವೀನ್ ಕುಶಾಲಪ್ಪ ಸ್ವಾಗತಿಸಿ, ಪಿ. ಕೃಷ್ಣಮೂರ್ತಿ ವಂದಿಸಿದರು.