ಮಡಿಕೇರಿ, ಅ. 1: ಪ್ರಸಕ್ತ ಸಾಲಿನ ದಸರಾ ರಜೆಯನ್ನು ಇದೇ ತಾ. 17 ರಿಂದ 21ರ ತನಕ ಘೋಷಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಶಿಕ್ಷಣ ಇಲಾಖೆಯ ಶಾಲಾ ಕಾಲೇಜುಗಳ ಸಂಬಂಧಪಟ್ಟ ಅಧಿಕಾರಿಗಳ ಅಭಿಪ್ರಾಯ ಕ್ರೋಢೀಕರಿಸಿ ತುಲಾಸಂಕ್ರಮಣ ಜಾತ್ರೆ ಸೇರಿದಂತೆ ನಾಲ್ಕು ದಿನಗಳಿಗೆ ಸೀಮಿತಗೊಳಿಸಿ ರಜಾ ಆದೇಶ ಹೊರಡಿಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಎದುರಾಗಿದ್ದ ತೀವ್ರ ಮಳೆ ಹಾಗೂ ಪ್ರಾಕೃತಿಕ ವಿಕೋಪ ಸಂಬಂಧ ಶಾಲಾ-ಕಾಲೇಜುಗಳಿಗೆ ಈ ಹಿಂದೆ ಸುಮಾರು 20 ದಿನಗಳಷ್ಟು ಅಧಿಕ ರಜೆ ನೀಡಿರುವ ಕಾರಣದಿಂದ ಅನಿವಾರ್ಯವಾಗಿ ದಸರಾ ರಜೆಯನ್ನು ಕಡಿಮೆಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ತಾ. 17 ರಂದು ಕಾವೇರಿ ತೀರ್ಥೋದ್ಭವ ಹಾಗೂ ದುರ್ಗಾಷ್ಟಮಿ, ತಾ. 18 ಆಯುಧ ಪೂಜೆ, ತಾ. 19 ರಂದು ವಿಜಯದಶಮಿ ರಜೆ ಇದ್ದು, ತಾ. 20 ಶನಿವಾರ ಮತ್ತು 21 ಭಾನುವಾರದ ಮಾಮೂಲಿ ರಜೆಯೊಂದಿಗೆ 22 ರಿಂದ ಎಂದಿನಂತೆ ತರಗತಿಗಳು ಪ್ರಾರಂಭಗೊಳ್ಳಲಿದೆ. ಮಾತ್ರವಲ್ಲದೆ ರಜೆ ನಂತರದಲ್ಲಿ ಶನಿವಾರಗಳಲ್ಲೂ ಪಠ್ಯ ಕ್ರಮ ಮುಂದುವರಿಸಿ, ಮಳೆಯಿಂದ ಹಿನ್ನೆಡೆಯಾಗಿರುವ ಬೋಧನಾ ಚಟುವಟಿಕೆಗಳನ್ನು ಸರಿದೂಗಿಸಲು ಕ್ರಮ ವಹಿಸಲಾಗಿದೆ.