ಸೋಮವಾರಪೇಟೆ,ಅ.1: ತಾಲೂಕಿನ ನಿಡ್ತ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ಬಾಣಾವರ, ಸಂಗಯ್ಯನಪುರ, ಭುವಂಗಾಲ, ದೊಡ್ಡಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾರ್ವಜನಿಕರು ಅರಣ್ಯ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಬಾಣಾವರ ಗೇಟ್ ಬಳಿಯಿರುವ ಅರಣ್ಯ ಇಲಾಖಾ ಉಪ ಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರುಗಳು, ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.ನಂತರ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರೊಂದಿಗೆ ಮಾತುಕತೆ ನಡೆಸಿದ ಪ್ರತಿಭಟನಾಕಾರರು, ಈ ವ್ಯಾಪ್ತಿಯಲ್ಲಿ ಕಾಡಾನೆಗಳು ನಿರಂತರ ಧಾಳಿ ನಡೆಸುತ್ತಿದ್ದು, ಕೃಷಿ ಫಸಲು ಸಂಪೂರ್ಣ ನಷ್ಟವಾಗುತ್ತಿದೆ. ಇದರೊಂದಿಗೆ ಮನುಷ್ಯರ ಮೇಲೂ ಕಾಡಾನೆ ಧಾಳಿ ನಡೆಸುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ತೆರಳಲೂ ಭಯಪಡುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಮೊನ್ನೆಯಷ್ಟೇ ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಗಳು ಮನಸೋಯಿಚ್ಛೆ ಧಾಳಿ ನಡೆಸಿ ನಾಟಿ ಮಾಡಿದ್ದ ಗದ್ದೆಯನ್ನು ನಾಶಗೊಳಿಸಿವೆ. ಇದರೊಂದಿಗೆ ಗೆಣಸು, ಜೋಳ ಬೆಳೆಗಳೂ ಹಾಳಾಗಿವೆ. ಭತ್ತದ ಪೈರನ್ನು ತಿಂದು ಹಾನಿ ಮಾಡಿವೆ. ಈ ಬಗ್ಗೆ ಹಲವಷ್ಟು ಬಾರಿ ಅರಣ್ಯ
(ಮೊದಲ ಪುಟದಿಂದ) ಇಲಾಖೆ ಯ ಗಮನ ಸೆಳೆದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರ ಮನವಿ ಆಲಿಸಿದ ನಂತರ ಮಾತನಾಡಿದ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ತಕ್ಷಣವೇ ಸೋಲಾರ್ ಬೇಲಿಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವದು. ಮನುಷ್ಯರ ಮೇಲೆ ಧಾಳಿ ನಡೆಸುತ್ತಿರುವ ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳ ಲಾಗುವದು. ದಸರಾದಿಂದ ಅನೆಗಳು ವಾಪಸ್ ಬಂದ ನಂತರ ಪುಂಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗುವದು. ಹಾನಿಗೊಳಗಾದ ಕೃಷಿ ಫಸಲಿಗೆ ನ್ಯಾಯೋಚಿತ ಪರಿಹಾರ ಒದಗಿಸ ಲಾಗುವದು ಎಂದು ಭರವಸೆ ನೀಡಿದರು. ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ತಾ.ಪಂ. ಸದಸ್ಯೆ ಸವಿತಾ ಈರಪ್ಪ, ಗ್ರಾ.ಪಂ. ಸದಸ್ಯ ಶಶಿಕುಮಾರ್, ಕೆದಂಬಾಡಿ ಮಧುಶಂಕರ್, ವಸಂತ್, ಲೋಕೇಶ್, ವೆಂಕಟೇಶ್, ರಮಾನಂದ್, ವಿಶ್ವನಾಥ್ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.