ಮಡಿಕೇರಿ, ಸೆ. 29: ರಾಜ್ಯ ಉಚ್ಚ ನ್ಯಾಯಾಲಯ ನಡೆಸಿದ ನ್ಯಾಯಾಧೀಶರುಗಳ ಆಯ್ಕೆ ಪ್ರಕ್ರಿಯೆ ಪರೀಕ್ಷೆಯಲ್ಲಿ ಜಿಲ್ಲೆಯ ಈರ್ವರು ಯುವ ವಕೀಲರು ನ್ಯಾಯಾಧೀಶರುಗಳಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಹೊಸೋಕ್ಲು ಸಚಿನ್ ಹಾಗೂ ವೀರಾಜಪೇಟೆಯ ಎ.ಎಸ್. ಸಲ್ಮಾ ಅವರುಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿದ್ದಾರೆ.ಮೈಸೂರಿನ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿರುವ ಸಚಿನ್ ಅವರು, 2013 ರಿಂದ ಮಡಿಕೇರಿಯ ಹಿರಿಯ ವಕೀಲ ಕೆ.ಎಂ. ಕೃಷ್ಣಭಟ್ ಅವರಲ್ಲಿ ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದಾರೆ. ನ್ಯಾಯಾಧೀಶನಾಗಬೇಕೆಂಬ ಮಹದಾಸೆ ಹೊಂದಿದ್ದ ಅವರು, ರಾಜ್ಯ ಉಚ್ಚ ನ್ಯಾಯಾಲಯ ಫೆಬ್ರವರಿಯಲ್ಲಿ ಆಹ್ವಾನಿಸಿದ್ದ ನ್ಯಾಯಾಧೀಶರ ಪರೀಕ್ಷೆಗೆ ಅರ್ಜಿ ಹಾಕಿದ್ದು, ಏಪ್ರಿಲ್‍ನಲ್ಲಿ ಇವರಿಗೆ ಅವಕಾಶ ದೊರೆತಿದೆ. ಪ್ರವೇಶ ಪರೀಕ್ಷೆಯಾದ ಪ್ರಿಲಿಮ್ಸ್‍ನಲ್ಲಿ 4,500 ಮಂದಿ ಪೈಕಿ ಶೇ. 80 ರಷ್ಟು ಅಂಕಗಳೊಂದಿಗೆ ತೇರ್ಗಡೆಯೊಂದಿಗೆ ಮೈನ್ಸ್‍ಗೆ ಅವಕಾಶ ಪಡೆದರು. ಜುಲೈನಲ್ಲಿ ನಡೆದ ಮೈನ್ಸ್‍ನಲ್ಲಿ 920 ಮಂದಿ ಪೈಕಿ 86 ಮಂದಿ ಮಾತ್ರ ಉತ್ತೀರ್ಣ ರಾಗಿದ್ದು, ಈ ಪೈಕಿ ಸಚಿನ್ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.

ಸಿ.ಎ. ರೂರಲ್ ಕೆಟಗೆರಿಯಲ್ಲಿ ಆಯ್ಕೆಯಾಗಿರುವ ಸಚಿನ್ ಅವರೊಂದಿಗೆ ರಾಜ್ಯಾದ್ಯಂತ ಈ ಸಾಲಿನಲ್ಲಿ ಒಟ್ಟು 33 ಮಂದಿ ಆಯ್ಕೆಗೊಂಡಿದ್ದಾರೆ. ಮೂಲತಃ ಹೆರವನಾಡು ಗ್ರಾಮದ, ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದ ದಿ. ರಮೇಶ್ ಹಾಗೂ ನಿವೃತ್ತ ಶಿಕ್ಷಕಿ ಅಮ್ಮವ್ವ ಅವರ ಪುತ್ರರಾಗಿರುವ ಸಚಿನ್ ಪ್ರಸ್ತುತ ತಾಯಿ ಹಾಗೂ ಸಹೋದರಿಯೊಂದಿಗೆ ಮಡಿಕೇರಿಯ ಪುಟಾಣಿ ನಗರದಲ್ಲಿ ನೆಲೆಸಿದ್ದಾರೆ.

ಸಲ್ಮಾ ಎ.ಎಸ್.

ಮೈಸೂರಿನ ಜೆಎಸ್‍ಎಸ್ ಕಾನೂನು ಪದವಿ ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿರುವ ಸಲ್ಮಾ ಅವರು, ಪ್ರಸ್ತುತ ವೀರಾಜಪೇಟೆಯ ಹಿರಿಯ ವಕೀಲ ಐ.ಆರ್. ಪ್ರಮೋದ್ ಅವರಲ್ಲಿ ವಕೀಲಿ ವೃತ್ತಿ ಅಭ್ಯಾಸಿಸುತ್ತಿದ್ದಾರೆ. 17ನೇ ರ್ಯಾಂಕ್‍ನೊಂದಿಗೆ ಸಲ್ಮಾ ಆಯ್ಕೆಯಾಗಿದ್ದಾರೆ.

ಇನ್ನು ಮುಂದಿನ ಹಂತವಾಗಿ ವೈದ್ಯಕೀಯ ಪರೀಕ್ಷೆ, ಪೊಲೀಸರ ಮಾಹಿತಿ ಸಂಗ್ರಹಣೆ ಬಳಿಕ ನ್ಯಾಯಾಧೀಶ ಹುದ್ದೆಯ ತರಬೇತಿ ನೀಡಲಾಗುತ್ತದೆ. ತರಬೇತಿಯ ಬಳಿಕ ನ್ಯಾಯಾಧೀಶರಾಗಿ ನ್ಯಾಯಾಲಯಗಳಿಗೆ ನೇಮಕ ಮಾಡಲಾಗುತ್ತದೆ.

-ಸಂತೋಷ್