ಮಡಿಕೇರಿ, ಸೆ. 28: ಜಿಲ್ಲೆಯಲ್ಲಿ ಈ ವರ್ಷ ಬಿದ್ದ ಭಾರೀ ಮಳೆಯಿಂದ ಅತಿವೃಷ್ಟಿ ಹಾಗೂ ಭೂಕುಸಿತ ಉಂಟಾಗಿದ್ದು, ತೀವ್ರ ಪ್ರಮಾಣದಲ್ಲಿ ಮನೆಗಳು ಹಾನಿಯಾಗಿರುತ್ತದೆ. ಹಾನಿಯಾಗಿರುವ ಪ್ರದೇಶಗಳ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಪರಿವೀಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ ವಾಸಕ್ಕೆ ಯೋಗ್ಯವಲ್ಲದ, ಹಾನಿಯಾದ ಮನೆಗಳನ್ನು ಗುರುತಿಸಿದ್ದು, ಈ ಮನೆ ಹಾನಿ ವಿವರದ ಪಟ್ಟಿಯನ್ನು ತಾ. 29 ರಂದು (ಇಂದು) ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ, ನಗರಸಭೆ, ಮಡಿಕೇರಿ ಹಾಗೂ ಪಟ್ಟಣ ಪಂಚಾಯಿತಿ, ಕುಶಾಲನಗರ ಕಚೇರಿಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವದು.(ಮೊದಲ ಪುಟದಿಂದ) ಸಾರ್ವಜನಿಕರು, ಫಲಾನುಭವಿಗಳು ತಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ, ಕುಶಾಲನಗರ ಕಚೇರಿಗಳಲ್ಲಿ ಪ್ರಕಟಿಸಲಾದ ಮನೆ ಹಾನಿ ವಿವರದ ಪಟ್ಟಿಯನ್ನು ಗಮನಿಸುವಂತೆ ಹಾಗೂ ಯಾವದೇ ಆಕ್ಷೇಪಣೆಗಳು ಇದ್ದಲ್ಲಿ ಅಕ್ಟೋಬರ್ 3 ರೊಳಗೆ ತಮ್ಮ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.