ನವದೆಹಲಿ, ಸೆ. 28: ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸುವ ಮೂಲಕ ಸುಪ್ರೀಂಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ಇದರಿಂದಾಗಿ 800 ವರ್ಷಗಳಿಂದ ಜಾರಿಯಲ್ಲಿದ್ದ ಪದ್ಧತಿಗೆ ತೆರೆ ಎಳೆಯಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬದು ದೇವಾಲಯದ (ಮೊದಲ ಪುಟದಿಂದ) ಆಡಳಿತ ಮಂಡಳಿಯ ವಾದವಾಗಿತ್ತು.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಇಂದು (ಸೆ 28) ನೀಡಿದೆ. ಕಳೆದ ಮೂರು ದಿನಗಳಲ್ಲಿ ಸುಪ್ರೀಂ ನೀಡಿದ ಐತಿಹಾಸಿಕ ತೀರ್ಪುಗಳಲ್ಲಿ ಇದೂ ಒಂದು. 10-50 ವರ್ಷ ದೊಳಗಿನ (ಋತುಮತಿ ಯಾಗುವ ಕಾರಣಕ್ಕಾಗಿ) ಮಹಿಳೆಯರಿಗೆ ಇಲ್ಲಿ ಪ್ರವೇಶ ನಿಷಿದ್ದ ಎನ್ನುವ ಕಾರಣವನ್ನು ದೇವಾಲಯದ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ನೀಡಿತ್ತು. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಸಿ.ಜೆ.ದೀಪಕ್ ಮಿಶ್ರಾ ಸೇರಿದಂತೆ ಪಂಚ ಪೀಠ ನ್ಯಾಯಾಧೀಶರು ಈ ಕುರಿತು ಪ್ರತ್ಯೇಕ ತೀರ್ಪನ್ನು ನೀಡಿದ್ದಾರೆ. ದೀಪಕ್ ಮಿಶ್ರಾ ಅವರು ತಮ್ಮ ತೀರ್ಪಿನಲ್ಲಿ ಮಹಿಳೆಯರು ಯಾವಾಗಲೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯರನ್ನು ದುರ್ಬಲರಂತೆ ನೋಡಬಾರದು. ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದೆ. ಮಹಿಳೆಯರ ಕುರಿತು ಸಮಾಜದ ಗ್ರಹಿಕೆ ಬದಲಾಗಬೇಕು ಎಂದು ಹೇಳಿದ್ದು ಕೊನೆಗೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ.
ಋತುಮತಿಯಾಗುವ ಮಹಿಳೆಯರಿಗೆ ದೇವಸ್ಥಾನದ ಪ್ರವೇಶದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ವರ್ಷದ ಅಕ್ಟೋಬರ್ 13ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.
ಈ ಐತಿಹಾಸಿಕ ತೀರ್ಪಿನ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎ. ಪದ್ಮಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮರು ಪರಿಶೀಲನಾ ಅರ್ಜಿ ಸಲ್ಲಿಸುವದಾಗಿ ಹೇಳಿದ್ದಾರೆ.
ಧಾರ್ಮಿಕ ಮುಖಂಡರ ಬೆಂಬಲ ಪಡೆದು, ದೇವಸ್ವಂ ಮಂಡಳಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ತೀರ್ಪಿನ ಪೂರ್ಣ ಪಾಠವನ್ನು ಸ್ಪಷ್ಟವಾಗಿ ತಿಳಿದು ಕೊಳ್ಳುತ್ತೇವೆ, ನಂತರ ಏನು ಮಾಡಬೇಕೆಂಬುದನ್ನು ನಿರ್ಧರಿ ಸುತ್ತೇವೆ ಎಂದು ಅವರು ಹೇಳಿದ್ದಾರೆ. "ಕೋರ್ಟ್ ತೀರ್ಪು ಬೇಸರ ಮೂಡಿಸಿದೆ. ಆದರೆ ನಾವು ಅದನ್ನು ಒಪ್ಪುತ್ತೇವೆ, ಸದ್ಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸುವದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಸುಪ್ರೀಂ ಕೋರ್ಟ್ ತೀರ್ಪನ್ನು ಪೂರ್ತಿ ಗ್ರಹಿಸಲಾಗುತ್ತದೆ” ಎಂದು ಶಬರಿಮಲೆ ಮುಖ್ಯ ಅರ್ಚಕ ಕಂದಾರು ರಾಜೀವರು ತಿಳಿಸಿದ್ದಾರೆ.