ಸೋಮವಾರಪೇಟೆ, ಸೆ. 29: ಮೂರು ಸ್ಥಳಗಳಲ್ಲಿ ಭೂಕುಸಿತಕ್ಕೆ ಒಳಗಾಗಿ ಕಳೆದ 42 ದಿನಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿರುವ ಹಾನಗಲ್ಲು-ತಾಕೇರಿ-ಬಿಳಿಗೇರಿ-ಮಾದಾಪುರ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿರುಸಿನ ಕಾಮಗಾರಿ ನಡೆಯುತ್ತಿದೆ.

ಹಾನಗಲ್ಲು ಗಣಪತಿ ದೇವಾಲಯದಿಂದ ದುದ್ದುಗಲ್ಲು ತೆರಳುವ ರಸ್ತೆಯಲ್ಲಿ ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಳೆದ ಆಗಸ್ಟ್ 18ರಂದು ಈ ರಸ್ತೆ ಕುಸಿದಿದ್ದು, ಕಳೆದ ಒಂದು ವಾರದಿಂದ ಕಾಮಗಾರಿ ಪ್ರಾರಂಭಗೊಂಡಿದೆ.

ಹಾನಗಲ್ಲು ಮಾರ್ಗವಾಗಿ ದುದ್ದುಗಲ್ಲು, ಕಿರಗಂದೂರು, ತಾಕೇರಿ, ಬಿಳಿಗೇರಿ, ಮಕ್ಕಳಗುಡಿಬೆಟ್ಟ, ಐಗೂರು, ಕುಂಬೂರು, ಗರ್ವಾಲೆ ಸೇರಿದಂತೆ ಇತರ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುತ್ತಿದ್ದ ಈ ರಸ್ತೆ ಕುಸಿತಗೊಂಡಿರು ವದಿಂದ ಸಾರ್ವಜನಿಕರು ಬದಲಿ ರಸ್ತೆಯನ್ನು ಅವಲಂಬಿಸಬೇಕಿದೆ.

ದುದ್ದುಗಲ್ಲು ಮುಖ್ಯರಸ್ತೆಯ ಬದಿಯಲ್ಲಿ ಪ.ಪಂ.ಯಿಂದ ನಿರ್ಮಿಸಲಾಗಿರುವ ಕುಡಿಯುವ ನೀರಿನ ಮೋಟಾರ್ ಪಂಪ್‍ಹೌಸ್ ಬಳಿ ಭಾರೀ ಪ್ರಮಾಣದಲ್ಲಿ ಭೂಕುಸಿದಿದ್ದು, ರಸ್ತೆ ಕೊಚ್ಚಿಕೊಂಡು ಪ್ರಪಾತ ಸೇರಿದೆ.

ಕಳೆದ ಒಂದು ವಾರದಿಂದ ಸ್ಯಾಂಡ್ ಬ್ಯಾಗ್‍ಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಸುಮಾರು 40ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತಾರು ಲೋಡ್‍ನಷ್ಟು ಎಂಸ್ಯಾಂಡ್‍ನ್ನು ಚೀಲಗಳಲ್ಲಿ ತುಂಬಿಸಿ ಹಾಕಲಾಗಿದ್ದು, ಇನ್ನೂ 50 ಲೋಡ್‍ಗೂ ಅಧಿಕ ಎಂ ಸ್ಯಾಂಡ್‍ನ ಅವಶ್ಯಕತೆಯಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

ಈ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನೂ 20 ದಿನಗಳು ಬೇಕಾಗಬಹುದು ಎಂದು ಕಾರ್ಮಿಕರು ಅಂದಾಜಿಸಿದ್ದರೆ, ಮುಂದಿನ ಒಂದು ವಾರಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖಾ ಅಭಿಯಂತರರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಆಗಾಗ್ಗೆ ಸುರಿಯುತ್ತಿರುವ ಮಳೆಯೂ ಸಹ ಕಾಮಗಾರಿಯ ವೇಗಕ್ಕೆ ತಡೆಯೊಡ್ಡಿದೆ. ಮಳೆ ನೀರು ಹರಿಯುತ್ತಿರುವದರಿಂದ ಮಣ್ಣು ಕುಸಿಯುತ್ತಿದ್ದು, ಇಂತಹ ಮಣ್ಣನ್ನು ತೆರವುಗೊಳಿಸಿ ನಂತರ ಸ್ಯಾಂಡ್ ಬ್ಯಾಗ್ ಅಳವಡಿಸಬೇಕಿದೆ ಎಂದು ಇಲಾಖೆಯ ಅಭಿಯಂತರ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.

ಇದರೊಂದಿಗೆ ದುದ್ದುಗಲ್ಲು ರಸ್ತೆಯ ಮೂರು ಕಡೆಗಳಲ್ಲಿ ರಸ್ತೆ ಕುಸಿದಿದ್ದು, ಭಾರೀ ಪ್ರಮಾಣದಲ್ಲಿ ಕುಸಿತಕ್ಕೊಳಗಾಗಿರುವ ಸ್ಥಳದಲ್ಲಿ ಮಾತ್ರ ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಸ್ಥಳದಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಉಳಿದೆಡೆ ಕಾಮಗಾರಿ ನಡೆಯಲಿದೆ. ಪ್ರಸ್ತುತ ಚರಂಡಿಯ ಮೇಲೆ ಬಡಿಗೆಗಳನ್ನು ಅಳವಡಿಸಿ, ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ದುದ್ದುಗಲ್ಲು, ಕಿರಗಂದೂರು, ತಾಕೇರಿ, ಬಿಳಿಗೇರಿ ಭಾಗಕ್ಕೆ ದಿನನಿತ್ಯ ನೂರಾರು ಸಂಖ್ಯೆಯ ಕಾರ್ಮಿಕರು ತೋಟ ಕೆಲಸ ಕಾರ್ಯಗಳಿಗೆ ತೆರಳು ತ್ತಿದ್ದು, ಇದರೊಂದಿಗೆ ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿತ್ತು. ಇದೀಗ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಆ ಭಾಗಗಳಿಗೆ ತೆರಳಲು ಬಳಸು ದಾರಿ ಯನ್ನು ಸದ್ಯಕ್ಕೆ ಅವಲಂಬಿಸು ವಂತಾಗಿದೆ.

- ವಿಜಯ್ ಹಾನಗಲ್