ಸೋಮವಾರಪೇಟೆ, ಸೆ. 27: ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಇಲಾಖೇತರ ಕೆಲಸಗಳನ್ನು ವಹಿಸುತ್ತಿರುವದರಿಂದ ಶಿಕ್ಷಕರು ದಿನನಿತ್ಯ ಒತ್ತಡದಲ್ಲಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸದಿದ್ದರೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲಾಗುವದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಹಲವಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಇಲಾಖೆಯ ನಲಿಕಲಿ, ಅಕ್ಷರ ದಾಸೋಹ, ಕ್ಷೀರಭಾಗ್ಯ ಸೇರಿದಂತೆ ಇತರ ಕೆಲಸಗಳೊಂದಿಗೆ ಶೈಕ್ಷಣಿಕವಾಗಿ ಮಕ್ಕಳ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಈ ಮಧ್ಯೆ ಶಿಕ್ಷಕರಿಗೆ ಮಕ್ಕಳ ವಿದ್ಯಾರ್ಥಿ ವೇತನದ ದಾಖಲಾತಿಗಳನ್ನು ಸಂಗ್ರಹಿಸುವ ಹೊಣೆಗಾರಿಕೆ ವಹಿಸಿರುವದು ಸರಿಯಲ್ಲ ಎಂದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಒದಗಿಸಲು ಪಡಿತರ ಚೀಟಿ, ಮಗು ಮತ್ತು ಪೋಷಕರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ನೀಡಬೇಕಿದ್ದು, ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಮಕ್ಕಳಿಗೆ ಹೇಳಿ ಕಳುಹಿಸಿದರೂ ಮನೆಯಿಂದ ದಾಖಲಾತಿಗಳನ್ನು ನೀಡುತ್ತಿಲ್ಲ. ಆದರೆ ಇಲಾಖೆಯ ಅಧಿಕಾರಿಗಳು ಕೊನೆಯ ದಿನಾಂಕವನ್ನು ನಿಗದಿಗೊಳಿಸಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂದರ್ಭ ಪಡೆದುಕೊಂಡ ಮಾಹಿತಿಯನ್ನು ನಾವುಗಳೇ ತಾಲೂಕು ಕಚೇರಿಗೆ ನೀಡುತ್ತೇವೆ. ತಹಶೀಲ್ದಾರ್ ಕಚೇರಿಯಿಂದ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ದಾಖಲಾತಿಗಳನ್ನು ಶಾಲೆಗೆ ಕಳುಹಿಸಬೇಕು.
ತಪ್ಪಿದ್ದಲ್ಲಿ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಯಾವದೇ ದಾಖಲಾತಿಗಳನ್ನು ಕೇಳದೇ ವಿದ್ಯಾರ್ಥಿ ವೇತನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ ಇತರ ಇಲಾಖೆಗಳ ಕೆಲಸವನ್ನು ಶಿಕ್ಷಕರಿಗೆ ವಹಿಸಿದರೆ, ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗ ಲಾಗುವದು ಎಂದು ಎಚ್ಚರಿಸಿದ ಮಂಜುನಾಥ್, ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಶಿಕ್ಷಕರಿಗೆ ಇತರ ಇಲಾಖೆಯ ಕೆಲಸಗಳನ್ನು ವಹಿಸುತ್ತಿರುವದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ಷಡ್ಯಂತ್ರವೂ ಅಡಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ತಾ. 27 ಮತ್ತು 28 ರಂದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಶಿಕ್ಷಕರ ಸಂಘವನ್ನು ಗಣನೆಗೆ ತೆಗೆದುಕೊಳ್ಳದೇ ಕಾಟಾಚಾರಕ್ಕೆ ಆಯೋಜಿಸಲಾಗಿದೆ. ಹಲವಷ್ಟು ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ಖಾಸಗಿ ಶಾಲೆಯಲ್ಲಿ ಸ್ಪರ್ಧೆ ಆಯೋಜಿಸ ಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಕ್ಟೋಬರ್ ಮೊದಲ ವಾರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಘದ ವತಿಯಿಂದ ಆಯೋಜಿಸಲಾಗುವದು ಎಂದು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ಜಿಲ್ಲಾ ಗೌರವಾಧ್ಯಕ್ಷ ಎಸ್.ಎ. ಯೋಗೇಶ್, ತಾಲೂಕು ಕಾರ್ಯದರ್ಶಿ ಟಿ.ಕೆ. ಬಸವರಾಜು ಉಪಸ್ಥಿತರಿದ್ದರು.