ಕೂಡಿಗೆ, ಸೆ. 27: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಪಡಿತರ ಆಹಾರಗಳನ್ನು ವಿತರಣೆ ಮಾಡಲು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಸೇರ್ಪಡೆಗೊಳಿಸದೆ ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಆಹಾರಗಳ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿಯ ಮೊದಲನೇ ಮತ್ತು ಎರಡನೇ ವಾರ್ಡಿನ ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ನೂರಾರು ಕುಟುಂಬಗಳಿದ್ದರೂ ಈ ಗ್ರಾಮ ಪಂಚಾಯಿತಿಯನ್ನು ಸಮೀಪದಲ್ಲಿ ಇರುವ ಕೂಡು ಮಂಗಳೂರು ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಸೇರ್ಪಡೆ ಗೊಳಿಸಿಲ್ಲ. ಪ್ರಕೃತಿ ವಿಕೋಪದ ಉಚಿತ ಪಡಿತರ ಆಹಾರವನ್ನು ವಿತರಿಸಲು ಕೂಡಿಗೆ ಗ್ರಾಮ ಪಂಚಾಯಿತಿ ಎಂದು ಹೆಸರು ಸೇರಿಸಲಾಗಿದೆ ವಿನಾಃ ಪಡಿತರ ಆಹಾರ ಸಂಗ್ರಹವಾಗಿರುವದು ಕೂಡುಮಂಗಳೂರು ಸಹಕಾರ ಸಂಘದ ಕೇಂದ್ರದಲ್ಲಿ. ಈ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಿಂದ ಕೂಡಿಗೆಯ ಬದಲು ಬಸವನತ್ತೂರು ಗ್ರಾಮದ ಪಡಿತರ ಚೀಟಿ ಫಲಾನುಭವಿಗೆ ವಿತರಣೆಯಾಗುತ್ತಿದೆ. ಕಂದಾಯ ಇಲಾಖೆ ಮತ್ತು ಆಹಾರ ಇಲಾಖೆಯವರು ಕೂಡಿಗೆ ಗ್ರಾಮ ಪಂಚಾಯಿತಿಯ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಸ್ತುಗಳನ್ನು ಒದಗಿಸುವದಾಗಿ ಭರವಸೆ ನೀಡಿದ್ದರೂ, ಇದುವರೆಗೂ ಯಾವದೇ ಪಡಿತರ ವಸ್ತುಗಳು ಬಂದಿಲ್ಲ. ಇದೇ ರೀತಿಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ತಾರತಮ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯವರು ನ್ಯಾಯಬೆಲೆ ಅಂಗಡಿಗಳಲ್ಲಿ ಪರಿಶೀಲಿಸಿ, ಅರ್ಹ ಫಲಾನುಭವಿಗೆ ದೊರಕಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.