ಮಡಿಕೇರಿ, ಸೆ. 27: ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿಯಾಗಿ ನವದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈಯದ್ ಮೊಹಿದ್ ಅಲ್ತಾಫ್ ಅವರನ್ನು ಜಾತ್ಯತೀತ ಜನತಾ ದಳದ ಕೊಡಗು ಜಿಲ್ಲಾ ಮುಖಂಡರು ಬೆಂಗಳೂರಿನಲ್ಲಿ ಭೇಟಿಯಾಗಿ ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಕುರಿತು ಚರ್ಚಿಸಿದರು.

ಜಿಲ್ಲೆಯಲ್ಲಿರುವ 94 ಸಿ ಮತ್ತು 94 ಸಿಸಿ ವ್ಯಾಪ್ತಿಯ ಮನೆಹಾನಿ ಸಂತ್ರಸ್ತರಿಗೂ ಸರಕಾರದಿಂದ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕೆಂದು ಪ್ರಮುಖರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಅಲ್ತಾಫ್ ಮುಂದಿನ ವಾರ ತಾನು ಜಿಲ್ಲೆಗೆ ಭೇಟಿ ನೀಡಿ ಸಂಕಷ್ಟದಲ್ಲಿರುವ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ ಎಂದು ಭರವಸೆ ನೀಡಿದರು. ವಿಶೇಷ ಅನುದಾನದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ನಿಯೋಗದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡ ಕೆ.ಎಂ. ಗಣೇಶ್, ರಾಜ್ಯ ಉಪಾಧ್ಯಕ್ಷ ಎಂ.ಎಂ. ಷರೀಫ್, ಹಿಂದುಳಿದ ವರ್ಗಗಳ ಘಟಕದ ಮಡಿಕೇರಿ ಅಧ್ಯಕ್ಷ ಎನ್.ಸಿ. ಸುನಿಲ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎ. ಇಬ್ರಾಹಿಂ, ಚೆಟ್ಟಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಡೆನ್ನಿ ಬರೋಸ್ ಮತ್ತಿತರ ಪ್ರಮುಖರು ಇದ್ದರು.