ಶನಿವಾರಸಂತೆ, ಸೆ. 27: ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿಗಳು ಗಡಿಭಾಗದಲ್ಲಿರುವದರಿಂದ ಮರ, ಮರಳು ದಂಧೆ ಹಾಗೂ ಅಪರಾಧಗಳು ಎಗ್ಗಿಲ್ಲದೆ ನಡೆಯುತ್ತಿವೆ. ಪೊಲೀಸ್ ಠಾಣೆಯ ಹಳೆಯ ವಾಹನದ ಸ್ಥಿತಿ ಹೇಳತೀರದ್ದಾಗಿತ್ತು. ಪೊಲೀಸರೆ ಕೈಕೊಟ್ಟು ವಾಹನವನ್ನು ತಳ್ಳಬೇಕಿತ್ತು. ಇದು ಸಾರ್ವಜನಿಕರಿಗೂ ತಿಳಿದ ವಿಚಾರವಾಗಿತ್ತು.
ಇತ್ತೀಚೆಗೆ ಜೆ.ಡಿ.ಎಸ್. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಿ.ಪಿ. ಬೋಜಪ್ಪ, ಜಿಲ್ಲಾ ವಕ್ತಾರ ಎಂ.ಎ. ಆದಿಲ್ ಪಾಶಾ, ಜಿಲ್ಲಾ ಪರಿಶಿಷ್ಟ ಜಾತಿ ಮಹಿಳಾ ಘಟಕದ ಅಧ್ಯಕ್ಷೆ ಲತಾ ಇತರರು ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರನ್ನು ಭೇಟಿ ಮಾಡಿ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ವಾಹನದ ಸ್ಥಿತಿಗತಿಯ ಬಗ್ಗೆ ಅವರ ಗಮನಕ್ಕೆ ತಂದಿದ್ದರು.
ತಕ್ಷಣ ಸ್ಪಂದಿಸಿದ ಎಸ್‍ಪಿಯವರು ಪರಿಶೀಲನೆ ಮಾಡಿ ಬೇಡಿಕೆಯಂತೆ 2-3 ದಿನಗಳಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಗೆ ನೂತನ ಪೊಲೀಸ್ ವಾಹನವನ್ನು ನೀಡುವ ಭರವಸೆ ನೀಡಿದ್ದರು. ಇದೀಗ ಶನಿವಾರಸಂತೆ ಪೊಲೀಸ್ ಠಾಣೆಗೆ ನೂತನ ಪೊಲೀಸ್ ವಾಹನದ ಆಗಮನವಾಗಿದೆ. ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಪೊಲೀಸ್ ಸಿಬ್ಬಂದಿಗಳೊಂದಿಗೆ ನೂತನ ಪೊಲೀಸ್ ವಾಹನಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿದರು.