ಮಡಿಕೇರಿ, ಸೆ. 27: ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಕಾಲೇಜಿನ 15ನೇ ಪದವಿ ಪ್ರದಾನ ಸಮಾರಂಭ ಅ. 3 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಇದೇ ಸಂದರ್ಭ ಫಾರೆನ್ಸಿಕ್ ದಂತ ವೈದ್ಯಕೀಯ ಸಂಶೋಧನಾ ಪ್ರಯೋಗಾಲ ಯವನ್ನು ಲೋಕಾರ್ಪಣೆ ಮಾಡಲಾಗು ವದೆಂದು ಪ್ರಾಂಶು ಪಾಲ ಡಾ. ಕೆ.ಸಿ. ಪೊನ್ನಪ್ಪ ಹಾಗೂ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ಡಾ. ಆರ್. ಶಶಿಧರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಗೇರಿಯ ಡಿಬ್ರೆಸನ್ ವಿಶ್ವ ವಿದ್ಯಾನಿಲಯದ ಉಪನ್ಯಾಸಕ ಹಾಗೂ ಹಂಗೇರಿಯನ್ ಆರ್ಥೋಡಾಂಟಿಕ್ ಸೊಸೈಟಿಯ ಅಧ್ಯಕ್ಷ ಡಾ. ಪೀಟರ್ ಬಾರ್ಬರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅಂತರಾಷ್ಟ್ರೀಯ ಅಭಿಶಿಕ್ಷಣ ಕರೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.

ಇತ್ತೀಚಿನ ವರ್ಷಗಳಲ್ಲಿ ಫಾರೆನ್ಸಿಕ್ ದಂತ ವೈದ್ಯಕೀಯ ಕ್ಷೇತ್ರ ಅತ್ಯಂತ ಪ್ರಭಾವಿ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಅಧಿಕ ಪ್ರಮಾದ ಹಾಗೂ ಅಪರಾಧಗಳನ್ನು ಗುರುತಿಸುವ ವಿಭಾಗಗಳನ್ನು ಹೊಂದಿದೆ. ಇದರ ಮಹತ್ವ ಮತ್ತು ಅಗತ್ಯವನ್ನು ಮನಗಂಡು ಕೊಡಗು ದಂತ ವೈದ್ಯಕೀಯ ಕಾಲೇಜು, ಸ್ಕಾಟ್‍ಲ್ಯಾಂಡ್‍ನ ದಂಡಿ ಫಾರೆನ್ಸಿಕ್ ವೈದ್ಯಕೀಯ ಹಾಗೂ ದಂತ ಸಂಸ್ಥೆಯ ಸಹಯೋಗದಲ್ಲಿ ಫಾರೆನ್ಸಿಕ್ ದಂತ ವೈದ್ಯಕೀಯ ಸಂಶೋಧನಾ ಪ್ರಯೋಗಾಲಯವನ್ನು ಕಾಲೇಜಿನಲ್ಲಿ ಆರಂಭಿಸಲಿದೆ. ಈ ಪ್ರಯೋಗಾಲಯವನ್ನು ಅ. 3 ರಂದು ಬೆಂಗಳೂರಿನ ಕಮಾಂಡೋ ಆಸ್ಪತ್ರೆಯ ಏರ್ ಕಮಡೋರ್ ಬಾಲಕೃಷ್ಣ ಜಯನ್ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ಕಾಲೇಜಿನಲ್ಲಿ ಉದ್ಘಾಟನೆಗೊಂಡಿರುವ ನಿದ್ರಾ ವಿಭಾಗವು ನಿದ್ರೆಯ ತೊಂದರೆಗಳನ್ನು ನಿವಾರಣೆ ಮಾಡುವ ಬಗ್ಗೆ ದಂತ ವೈದ್ಯರಿಗೆ ಅಗತ್ಯ ತರಬೇತಿ ನೀಡುತ್ತಿರುವದಲ್ಲದೆ, ಈಗಾಗಲೇ 25 ದಂತ ವೈದ್ಯರಿಗೆ ತರಬೇತಿ ನೀಡಿ 500 ಕ್ಕೂ ಅಧಿಕ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಮೂಲಕ ಉತ್ತಮ ಫಲಿತಾಂಶ ತಂದು ಕೊಟ್ಟಿದೆ. ಇದರಲ್ಲಿ ಬಡವರಿಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ನೀಡಲಾಗಿದೆ ಎಂದರು.

ಕಾಲೇಜಿನ ಪ್ರಗತಿಯ ಬಗ್ಗೆಯೂ ಇದೇ ಸಂದರ್ಭ ಮಾಹಿತಿ ನೀಡಿದ ಡಾ. ಪೊನ್ನಪ್ಪ ಅವರು, ಈ ಬಾರಿಯೂ ಸಂಸ್ಥೆಯು ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆಯುವದರೊಂದಿಗೆ, 3 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ, ಬಿಡಿಎಸ್‍ನಲ್ಲೂ ಶೇ. 99.5 ರಷ್ಟು ಫಲಿತಾಂಶ ಲಭ್ಯವಾಗಿದ್ದು, ಪ್ರಥಮ ಬಿಡಿಎಸ್‍ನಲ್ಲಿ 5 ಮಂದಿ ಉನ್ನತ, 26 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದರು. ದ್ವಿತೀಯ ಬಿಡಿಎಸ್‍ನಲ್ಲಿ ನಾಲ್ವರು ಉನ್ನತ ಶ್ರೇಣಿ ಹಾಗೂ 22 ಮಂದಿ ಪ್ರಥಮ ಶ್ರೇಣಿ, ತೃತೀಯ ಬಿಡಿಎಸ್‍ನಲ್ಲಿ ನಾಲ್ವರು ಉನ್ನತ ಶ್ರೇಣಿಯಲ್ಲಿ ಹಾಗೂ 4ನೇ ವರ್ಷದ ಬಿಡಿಎಸ್‍ನಲ್ಲಿ ಒಬ್ಬರು ಉನ್ನತ ಶ್ರೇಣಿ ಮತ್ತು 15 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.