ಮಡಿಕೇರಿ, ಸೆ. 26: ಭಾರತೀಯ ರಕ್ಷಣಾ ಪಡೆಯ ಪಿತಾಮಹ, ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಯ ಪ್ರಪ್ರಥಮ ಮಹಾ ದಂಡನಾಯಕರಾಗಿ (ಕಮಾಂಡರ್ ಇನ್ ಚೀಫ್) ನಿಯುಕ್ತಿಗೊಂಡು ಸೇನಾ ಇತಿಹಾಸದಲ್ಲಿ ದಂತ ಕಥೆಯಾಗಿರುವ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ ಬೃಹತ್ ಪ್ರತಿಮೆ ಬೆಂಗಳೂರು ಮಹಾನಗರಿಯಲ್ಲಿ ಇಂದು ಅನಾವರಣಗೊಂಡಿತು.ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಕಾರ್ಯಪ್ಪ ಅವರ ಬೃಹತ್ ಕಂಚಿನ ಪ್ರತಿಮೆ ಇದಾಗಿದ್ದು, ಬೆಂಗಳೂರು ಕೊಡವ ಸಮಾಜದ ಸನಿಹದಲ್ಲಿರುವ ಉದ್ಯಾನವನದಲ್ಲಿ ಅಳವಡಿಸಲ್ಪಟ್ಟಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಬೆಂಗಳೂರು ಕೊಡವ ಸಮಾಜ ಈ ಪ್ರತಿಮೆಯನ್ನು ಸ್ಥಾಪಿಸಿದೆ. ಸುಮಾರು ರೂ. 15.50 ಲಕ್ಷ ವೆಚ್ಚದಲ್ಲಿ
(ಮೊದಲ ಪುಟದಿಂದ) 1500 ಕೆ.ಜಿ. ತೂಕವಿರುವ 9 ಅಡಿ ಎತ್ತರದ ಈ ಪ್ರತಿಮೆ ಇದೀಗ ಬೆಂಗಳೂರಿನಲ್ಲಿ ಕೊಡಗಿನ ಸೇನಾ ಇತಿಹಾಸವನ್ನು ಸಾರಲಿದೆ.
ಬೆಂಗಳೂರು ಕೊಡವ ಸಮಾಜದ ಸನಿಹದಲ್ಲಿರುವ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್, ಮಿಲ್ಲರ್ ರಸ್ತೆ, ವಸಂತನಗರ ಮುಖ್ಯ ರಸ್ತೆ, ಜಯಮಹಲ್ ರಸ್ತೆ, ಮಿಷನ್ ರಸ್ತೆ ಸೇರಿರುವ ಕಿರು ಉದ್ಯಾನವನದಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರತಿಮೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಪ್ಪ ಅವರು ವೀರ ಸೇನಾನಿಯಾಗಿದ್ದು, ಇವರ ಪ್ರತಿಮೆಯನ್ನು ಸ್ಥಾಪಿಸುತ್ತಿರುವದು ತಡವಾದರೂ ಸಂತಸವುಂಟು ಮಾಡಿದೆ. ಇವರ ಬಗ್ಗೆ ಎಲ್ಲರಿಗೂ ಅಭಿಮಾನವಿದೆ ಎಂದು ಹೇಳಿ ಕಾರ್ಯಪ್ಪ ಅವರ ದೇಶಭಕ್ತಿಯನ್ನು ಸ್ಮರಿಸಿದರು.
ಬೆಂಗಳೂರು ಕೊಡವ ಸಮಾಜವು ಈ ವೃತ್ತಕ್ಕೆ ಫೀ.ಮಾ. ಕಾರ್ಯಪ್ಪ ವೃತ್ತ ಎಂದು ನಾಮಕರಣ ಮಾಡುವಂತೆ ಹಾಗೂ ಉದ್ಯಾನವನದ ನಿರ್ವಹಣೆಗೆ ಕೊಡವ ಸಮಾಜಕ್ಕೆ ಅವಕಾಶ ನೀಡುವಂತೆ ಮಾಡಿದ ಮನವಿಗೆ ಅವರು ಒಪ್ಪಿಗೆ ಸೂಚಿಸಿದರು.
ಪ್ರತಿಮೆ ಅನಾವರಣದ ಸಂದರ್ಭ ಸ್ಥಳೀಯ ಮಹಾ ಪೌರರಾದ ಸಂಪತ್ರಾಜ್, ಲೋಕಸಭಾ ಸದಸ್ಯ ಪಿ.ಸಿ. ಮೋಹನ್, ಮಾಜಿ ಸಚಿವ ರೋಷನ್ ಬೇಗ್, ಸ್ಥಳೀಯ ಕಾರ್ಪೋರೇಟರ್ ಸಂಪತ್ ಕುಮಾರ್ ಮತ್ತಿತರರು ಹಾಜರಿದ್ದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜಕುಮಾರ್, ಕಾರ್ಯದರ್ಶಿ, ಚೆನ್ನಪಂಡ ಕೆ. ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ಮಾಚೆಟ್ಟಿರ ಎಂ. ಡಾಲು, ಖಜಾಂಚಿ ಬೂವಡಿರ ಎಂ. ಗಣಪತಿ, ಜಂಟಿ ಖಜಾಂಚಿ ಚೇರಂಡ ಎಂ. ಸುರೇಶ್, ಸೇರಿದಂತೆ ಕೊಡವ ಸಮಾಜದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.