ಮಡಿಕೇರಿ, ಸೆ. 26: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಉತ್ಸವ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ಈಗಾಗಲೇ ತೀರ್ಮಾನ ಮಡಿಕೇರಿ, ಸೆ. 26: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಉತ್ಸವ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ಈಗಾಗಲೇ ತೀರ್ಮಾನ ಉತ್ಸವವನ್ನು ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾದ ಅನಾಹುತÀದಿಂದ ದಸರಾ ಸಮಿತಿ ಅಥವಾ ದಶಮಂಟಪ ಸಮಿತಿಗಳು ಸಾರ್ವಜನಿಕರಲ್ಲಿ ಹಣ ಸಂಗ್ರಹಣೆ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೊತೆಗೆ ಶೋಕದ ಮನೆಯಲ್ಲಿ ಸಂಭ್ರಮ ಬೇಡ ಎಂಬ ಕಾರಣಕ್ಕಾಗಿ ಸರಳವಾಗಿ ಉತ್ಸವ ಆಚರಿಸಲು ಎರಡು ಸಮಿತಿಗಳು ನಿರ್ಣಯ ಕೈಗೊಂಡಿವೆ. ಪ್ರತಿ ವರ್ಷವೂ ಸರಕಾರದಿಂದ ದಸರಾ ಉತ್ಸವಕ್ಕೆ ಅನುದಾನ ಬರುತ್ತಿದ್ದು, ಈ ಬಾರಿ ಸರಕಾರದ ಅನುದಾನದಲ್ಲೇ ಉತ್ಸವ ಆಚರಿಸಲು ದಸರಾ ಸಮಿತಿ ತೀರ್ಮಾನಕೈಗೊಂಡಿತ್ತು.
ಇತ್ತೀಚೆಗೆ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೊಡಗಿನ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿ ದಸರಾಗೆ ಸರಕಾರದಿಂದ ಹಣ ಮಂಜೂರು ಮಾಡುವಂತೆ ಮನವಿ ಮಾಡಲು ಬೆಂಗಳೂರಿಗೆ
(ಮೊದಲ ಪುಟದಿಂದ) ತೆರಳಿತ್ತಾದರೂ, ಅಲ್ಲಿ ಮುಖ್ಯಮಂತ್ರಿಗಳು ಕಾರಣಾಂತರಗಳಿಂದ ಭೇಟಿಗೆ ಸಿಗಲಿಲ್ಲ. ಈ ನಡುವೆ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಮಡಿಕೇರಿಗೆ ಆಗಮಿಸಿ ದಸರಾ ಉತ್ಸವದ ಕುರಿತು ಸಮಿತಿಯೊಂದಿಗೆ ಚರ್ಚಿಸುವದಾಗಿ ಸಮಿತಿಗೆ ತಿಳಿಸಿದ್ದರಾದರೂ, ಇದುವರೆಗೂ ಅವರಿಗೆ ಸಮಯಾವಕಾಶ ದೊರಕಲಿಲ್ಲ. ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗದ ಹಿನ್ನೆಲೆಯಲ್ಲಿ ಸರಕಾರದ ಅನುದಾನವನ್ನು ನಂಬಿಕೊಂಡಿರುವ ದಸರಾ ಸಮಿತಿ ಇದೀಗ ಉಸ್ತುವಾರಿ ಸಚಿವರ ನಿರ್ಧಾರ ಲಭ್ಯವಾಗದ ಹಿನ್ನೆಲೆಯಲ್ಲಿ ಪರದಾಡುವಂತಾಗಿದೆ.
ನವರಾತ್ರಿ ಆರಂಭಕ್ಕೆ ಕೇವಲ 14 ದಿನಗಳು ಮಾತ್ರ ಬಾಕಿ ಉಳಿದಿದ್ದು, ಇನ್ನೂ ಕೂಡ ದಸರಾಗೆ ಸಂಬಂಧಿಸಿದಂತೆ ಯಾವದೇ ಪೂರ್ವ ತಯಾರಿಗಳು ನಡೆದಿಲ್ಲ. ಸರಳವಾಗಿ ಉತ್ಸವ ಆಚರಿಸಲು ತೀರ್ಮಾನಿಸಲಾಗಿದ್ದರೂ ಅದಕ್ಕೂ ಹಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಮುಂದೇನು? ಎಂಬ ಚಿಂತೆಯಲ್ಲಿ ಸಮಿತಿ ಮುಳುಗಿದೆ.
ತೀರ್ಮಾನ ಮಾಡುತ್ತೇನೆ: ಕಾವೇರಮ್ಮ
ಈ ಎಲ್ಲ ಬೆಳವಣಿಗೆಗಳ ಕುರಿತು ‘ಶಕ್ತಿ’ ದಸರಾ ಸಮಿತಿ ಅಧ್ಯಕ್ಷರಾಗಿರುವ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಬಳಿ ಪ್ರತಿಕ್ರಿಯೆ ಬಯಸಿದಾಗ, ದಸರಾ ಉತ್ಸವ ಸಂಬಂಧ ಸರಳ ಆಚರಣೆಗೆ ತೀರ್ಮಾನವಾಗಿದ್ದರೂ, ಉಸ್ತುವಾರಿ ಸಚಿವರು ಇನ್ನೂ ಕೂಡ ಲಭ್ಯವಾಗದ್ದರಿಂದ ಏನೂ ಹೇಳಲಾಗುತ್ತಿಲ್ಲ. ಸಮಿತಿ ಪ್ರಮುಖರೊಂದಿಗೆ ಚರ್ಚಿಸಿ ಉತ್ಸವದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇನೆ ಎಂದು ಅವರು ಮಾಹಿತಿಯಿತ್ತರು.
ದಸರಾ ನಡೆಯಲೇಬೇಕಿದೆ: ಮಹೇಶ್
ಮಡಿಕೇರಿ ದಸರಾ ಉತ್ಸವ ಐತಿಹಾಸಿಕ ಹಬ್ಬವಾಗಿದ್ದು, ಆಚರಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಸರಳ ಆಚರಣೆಗೆ ಎಲ್ಲರ ಒಪ್ಪಿಗೆ ಇದೆ. ಆದರೆ ಪ್ರಸಕ್ತ ವರ್ಷ ಸರಕಾರದ ಅನುದಾನದಲ್ಲೇ ದಸರಾ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಭೇಟಿಗೆ ತೆರಳಿದಾಗಲೂ ಅವರು ಸಿಗಲಿಲ್ಲ. ಮಡಿಕೇರಿಗೆ ಬಂದು ಮಾತುಕತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಉಸ್ತುವಾರಿ ಸಚಿವರು ಇದುವರೆಗೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾವದೇ ತೀರ್ಮಾನ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಹೇಳಿದರು.
ದಸರಾ ಸಮಿತಿ ತೀರ್ಮಾನ ತಿಳಿಸಲಿ: ರವಿಕುಮಾರ್
ಸರಳ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆಯಲ್ಲಿ ಮಂಟಪಗಳನ್ನು ಸರಳವಾಗಿ ತಯಾರು ಮಾಡಲು ತೀರ್ಮಾನಿಸಲಾಗಿದೆ. ಆದರೆ ಅದಕ್ಕೂ 5 ರಿಂದ 8 ಲಕ್ಷ ವೆಚ್ಚವಿದೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಬರುವ ಅನುದಾನದಲ್ಲಿ ಶೇ. 60 ರಷ್ಟು ಹಣವನ್ನು ಹತ್ತು ಮಂಟಪ ಹಾಗೂ ಕರಗಗಳಿಗೆ ನೀಡುವಂತೆ ಮನವಿ ಮಾಡಿದ್ದೇನೆ. ಒಂದು ವೇಳೆ ಸರಕಾರದಿಂದ ಅನುದಾನ ಬಾರದಿದ್ದರೆ ದಸರಾ ಸಮಿತಿಯ ಮುಂದಿನ ನಡೆ ಏನು ಎಂಬದರ ಬಗ್ಗೆ ಸ್ಪಷ್ಟಪಡಿಸಲಿ ಎಂದು ದಶ ಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಅಭಿಪ್ರಾಯಿಸಿದ್ದಾರೆ. ದಸರಾ ಸಮಿತಿ ತನ್ನ ನಿರ್ಧಾರ ಪ್ರಕಟಿಸಿದರೆ ಮುಂದೇನು ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲು ದಶಮಂಟಪ ಸಮಿತಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲ: ಅನಿಲ್
ಅನುದಾನದ ಕುರಿತು ಗೊಂದಲವಿರುವ ಕಾರಣ ಜೊತೆಗೆ ಸಮಯಾವಕಾಶವೂ ಕಡಿಮೆ ಇರುವದರಿಂದ ಈ ಬಾರಿ ದಸರಾದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗುವದಿಲ್ಲ ಎಂದು ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಅನುದಾನ ಕೊಟ್ಟರೆ ಕ್ರೀಡೆ: ಜಗದೀಶ್
ದಸರಾ ಕ್ರೀಡಾಕೂಟಕ್ಕೆ ದಸರಾ ಸಮಿತಿ ಅನುದಾನ ಒದಗಿಸಿದರೆ ಮಾತ್ರ ಈ ಬಾರಿ ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲು ಚಿಂತಿಸಲಾಗುತ್ತದೆ. ಇಲ್ಲವಾದರೆ ಕ್ರೀಡಾ ಕೂಟ ಆಯೋಜನೆ ಅಸಾಧ್ಯ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಜಗದೀಶ್ ಮಾಹಿತಿ ನೀಡಿದ್ದಾರೆ.
ಸೂಚನೆಯಂತೆ ತೀರ್ಮಾನ: ರಮೇಶ್
ದಸರಾ ಬಹುಭಾಷ ಕವಿಗೋಷ್ಠಿಯನ್ನು ಆಯೋಜಿಸುವಲ್ಲಿ ದಸರಾ ಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ಕವಿಗೋಷ್ಠಿ ಸಮಿತಿ ಬದ್ಧವಾಗಿರುತ್ತದೆ ಎಂದು ಕವಿಗೋಷ್ಠಿ ಸಮಿತಿ ಅಧ್ಯಕ್ಷ ರಮೇಶ್ ಉತ್ತಪ್ಪ ಹೇಳಿದ್ದಾರೆ.