ಮಡಿಕೇರಿ, ಸೆ. 26: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ದೈನಂದಿನ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆಯಿಂದ ತೀವ್ರ ಸಮಸ್ಯೆ ಎದುರಾಗಿರುವ ಕುರಿತು ತಿಳಿದುಬಂದಿದೆ. ಪ್ರಸಕ್ತ ನಗರಸಭೆಯ 20 ಮಂದಿ ಖಾಯಂ ನೌಕರರೊಂದಿಗೆ ನೇರ ನೇಮಕಾತಿಯ 28 ಮಂದಿ ಸಹಿತ ಇಡೀ ನಗರ ವ್ಯಾಪ್ತಿಯಲ್ಲಿ ಕೇವಲ 48 ಕಾರ್ಮಿಕರು ಕೆಲಸ ನಿರ್ವಹಿಸುವಂತಾಗಿದೆ. ಕಳೆದ ಮಾರ್ಚ್ ತನಕ ಸರಿಸುಮಾರು 40 ರಿಂದ 50 ಮಂದಿ ಹೊರ ಗುತ್ತಿಗೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಅವರುಗಳನ್ನು ಕೆಲಸದಿಂದ ಕೈಬಿಡಲಾಗಿದೆ.ಹೀಗಾಗಿ ಉಳಿದಿರುವ ನಗರಸಭೆಯ ಮಾಮೂಲಿ ನೌಕರರ ಪೈಕಿ, ಇತ್ತೀಚೆಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಲ್ವರು ನೌಕರರನ್ನು ಅಧ್ಯಯನ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ಕಳುಹಿಸಲಾಗಿದೆ. ಇನ್ನುಳಿದಂತೆ 42 ನೌಕರರ ಪೈಕಿ ಸುಮಾರು 18 ಮಂದಿ ಮಹಿಳಾ ಕಾರ್ಮಿಕರು ನಿತ್ಯ ಬೀದಿಗಳಲ್ಲಿ ಸ್ವಚ್ಛತೆಗೆ ತೆರಳುವಂತಾಗಿದೆ. ಮಾತ್ರವಲ್ಲದೆ ಅನೇಕರು ಅನಾರೋಗ್ಯ ಇತ್ಯಾದಿ ಕಾರಣದಿಂದ ಗೈರು ಹಾಜರಾಗುತ್ತಿದ್ದಾರೆ.

ಅಂತೆಯೇ ನಗರದ 23 ವಾರ್ಡ್‍ಗಳಲ್ಲಿ ನಿತ್ಯ ಕಸವನ್ನು ಸಂಗ್ರಹಿಸುವ ಸಲುವಾಗಿ ಪ್ರತಿ ವಾಹನದೊಂದಿಗೆ ತಲಾ ಒಬ್ಬರು ತೆರಳುವಂತಾಗಿದೆ. ಹೀಗೆ ಒಟ್ಟು 12 ವಾಹನಗಳಿಗೆ ನಿತ್ಯ ಕಾರ್ಮಿಕರನ್ನು ನಿಯೋಜಿಸುವಂತಾಗಿದ್ದು, ಇತರ 12 ಮಂದಿ ಚಾಲಕರ ಪೈಕಿ ಇಬ್ಬರು ತಿಂಗಳುಗಟ್ಟಲೆ ಕರ್ತವ್ಯಕ್ಕೆ ಗೈರು ಹಾಜರಾಗುವದರೊಂದಿಗೆ ನಾಪತ್ತೆಯಾಗಿದ್ದಾರೆ.

ಕೆಲವೊಮ್ಮೆ ದಿನವೊಂದರಲ್ಲಿ ಇರುವ ಕಾರ್ಮಿಕರ ಪೈಕಿ ಕೆಲವರು ಸಾಮೂಹಿಕ ಗೈರು ಹಾಜರಾಗುತ್ತಿರುವ ಆರೋಪವೂ ಕೇಳಿಬಂದಿದೆ. ಪರಿಣಾಮ ನಿರ್ಧಿಷ್ಟವಾಗಿ ವಾರ್ಡ್‍ವಾರು ಕೆಲಸ ನಿರ್ವಹಿಸುವ ಕಾರ್ಮಿಕರು ಒತ್ತಡದಲ್ಲಿ ಸಿಲುಕುವದ ರೊಂದಿಗೆ, ಎಲ್ಲಿಯೂ ಸಮರ್ಪಕ ವಾಗಿ

(ಮೊದಲ ಪುಟದಿಂದ) ಕೆಲಸ ನಿರ್ವಹಿಸಲಾರದೆ ಪರದಾಡುವಂತಾಗಿದೆ.

ನೌಕರರೇ ಇಲ್ಲ: ಒಂದೊಮ್ಮೆ ನೂರಾರು ಸಂಖ್ಯೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಡಿಕೇರಿಯ ಹಿಂದಿನ ಪುರಸಭೆಯು, ಇಂದು ನಗರಸಭೆಯಾಗಿ ಮುಂಬಡ್ತಿ ಪಡೆದಿದ್ದರೂ, ಸರಕಾರದ ನೀತಿಯಿಂದಾಗಿ ಶೇ. 50 ರಷ್ಟು ಪೌರ ಕಾರ್ಮಿಕರು ಕಡಿಮೆಯಾಗಿದ್ದಾರೆ. ಕಾರಣ ಸರಕಾರದ ನಿಯಮ ಪ್ರಕಾರ ಪ್ರತಿ 750 ಮಂದಿ ನಾಗರಿಕರಿಗೆ ಓರ್ವ ಪೌರ ಕಾರ್ಮಿಕನ ಮಾನದಂಡ ವಿಧಿಸಲಾಗಿದೆ. ಆ ಹಿನ್ನೆಲೆಯಲ್ಲಿ ಇತ್ತೀಚಿನ ತನಕವೂ ಹೊರ ಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರನ್ನು ಕೈಬಿಡಲಾಗಿದೆ.

ಪರಿಣಾಮ ಗುಡ್ಡ ಬೆಟ್ಟಗಳಿಂದ ಕೂಡಿರುವ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಿಪರೀತ ಮಳೆ, ಗಾಳಿ, ಚಳಿಯ ನಡುವೆ ಬೇರೆ ಬೇರೆ ಬಡಾವಣೆಗಳ ಏರಿಳಿತ ವ್ಯಾಪ್ತಿಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ಪೌರ ಕಾರ್ಮಿಕರ ಕೊರತೆ ನಡುವೆ ಇರುವವರು ಒತ್ತಡದಲ್ಲಿ ಸಿಲುಕುವಂತಾಗಿದೆ.

ಜಿಲ್ಲಾಧಿಕಾರಿಗೆ ಪ್ರಸ್ತಾವನೆ: ಮುಂಬರಲಿರುವ ದಸರಾ ಇತ್ಯಾದಿ ವೇಳೆ ಮಡಿಕೇರಿಯತ್ತ ಪ್ರವಾಸಿಗರ ಭೇಟಿಯೊಂದಿಗೆ ನಗರ ನೈರ್ಮಲ್ಯ ಕಾಪಾಡಲು ಸಾಕಷ್ಟು ಸಮಸ್ಯೆ ತಲೆದೋರುವ ಕಾರಣಕ್ಕಾಗಿ, ಕನಿಷ್ಟ ಮೂವತ್ತು ಮಂದಿ ದಿನಗೂಲಿ ಗಳನ್ನು ತಾತ್ಕಾಲಿಕ ವ್ಯವಸ್ಥೆಯಡಿ ನಿಯೋಜಿಸಿಕೊಳ್ಳಲು ಜಿಲ್ಲಾಧಿಕಾರಿ ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ನಗರಸಭೆಯ ಪ್ರಮುಖರು ಜನಪ್ರತಿನಿಧಿಗಳ ಸಭೆ ನಡೆಸಿ ತುರ್ತು ನಿರ್ಧಾರ ತೆಗೆದುಕೊಳ್ಳಬೇಕಿದೆ. ಪೌರ ಕಾರ್ಮಿಕರಿಲ್ಲದೆ ಸಾರ್ವಜನಿಕ ಸಮಸ್ಯೆಗಳೊಂದಿಗೆ, ನಗರದ ನೈರ್ಮಲ್ಯ ಕಾಪಾಡುವ ದಿಸೆಯಲ್ಲಿ ಸೂಕ್ತ ಕ್ರಮ ವಹಿಸುವದು ಜವಾಬ್ದಾರಿಯುತರ ಕರ್ತವ್ಯವೂ ಆಗಿದೆ.