ಕುಶಾಲನಗರ, ಸೆ. 26: ಪ್ರಕೃತಿ ವಿಕೋಪಕ್ಕೆ ತುತ್ತಾದ ಅಸಂಖ್ಯಾತ ಸಂತ್ರಸ್ತರ ಮನೆಗಳು ಕೆಲವೆಡೆ ಶಾಶ್ವತವಾಗಿ ನಾಶಗೊಂಡಿದ್ದರೆ, ಕೆಲವೆಡೆ ಮನೆಗಳು ಭಾಗಶಃ ಹಾನಿಗೊಂಡಿದ್ದು ಕಾಣಬಹುದು. ಈ ನಡುವೆ ತಮ್ಮ ಮನೆಗಳಿಗೆ ಯಾವದೇ ಹಾನಿಯಾಗದಿದ್ದರೂ, ದುರಂತ ಕಂಡು ಭಯಭೀತರಾಗಿ ತಮ್ಮ ಮನೆ - ಮಠಗಳನ್ನು ಬಿಟ್ಟು ಸಾಂತ್ವನ ಕೇಂದ್ರಗಳಲ್ಲಿ ಅಥವಾ ನೆಂಟರಿಷ್ಟರ ಮನೆಗಳಲ್ಲಿ ಆಶ್ರಯ ಕಂಡ ಬಹುತೇಕ ಜನ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತಿರುವದು ಪ್ರಸಕ್ತ ಕಂಡುಬರುತ್ತಿರುವ ದೃಶ್ಯವಾಗಿದೆ. ಹಲವೆಡೆ ಮನೆಗೆ ತೆರಳುವ ಸಂಪರ್ಕ ರಸ್ತೆ ಕುಸಿತಗೊಳ್ಳುವದರೊಂದಿಗೆ ತಮ್ಮ ನೆಲೆಗೆ ತೆರಳಲಾರದೆ ಹಲವು ಮಂದಿ ಇನ್ನೂ ತಮ್ಮ ಬದುಕು ಕಟ್ಟಿಕೊಟ್ಟ ಮನೆಗಳಿಗೆ ಹಿಂತಿರುಗಲು ಅಸಾಧ್ಯ ಆಗಿದ್ದು ಒಂದೆಡೆಯಾದರೆ ಇನ್ನೊಂದೆಡೆ ಕೆಲವು ಮಂದಿ ಮಾತ್ರ ಮನೆ, ಮಠಗಳಿಗೆ ಯಾವದೇ ರೀತಿಯ ಹಾನಿಯಾಗದಿದ್ದರೂ ಆಶ್ರಯ ಕೇಂದ್ರಗಳಿಂದ ಹಿಂತಿರುಗಲು ಮಾತ್ರ ಸ್ವಲ್ಪಮಟ್ಟಿಗೆ ಹಿಂದೇಟು ಹಾಕುತ್ತಿರುವ ಪ್ರಕರಣಗಳು ಗೋಚರಿಸಿದೆ.

ಕುಶಾಲನಗರ ವಾಲ್ಮೀಕಿ ಕೇಂದ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಆಶ್ರಯ ಪಡೆದಿರುವ ಸಂತ್ರಸ್ತರಲ್ಲಿ ಬಹುತೇಕ ಪ್ರಕೃತಿ ವಿಕೋಪಕ್ಕೆ ಒಳಗಾದ ಮಕ್ಕಂದೂರು ಗ್ರಾಮ ವ್ಯಾಪ್ತಿಯ ನಿವಾಸಿಗಳು ಒಳಗೊಂಡಿದ್ದಾರೆ. ಮಕ್ಕಂದೂರು ವ್ಯಾಪ್ತಿಯಲ್ಲಿ ತಂತಿಪಾಲ ರಸ್ತೆ ಬಹುತೇಕ ಕುಸಿಯುವದರೊಂದಿಗೆ ಅಲ್ಲಿಯ ಕೆಲವು ಮನೆಗಳು ಕೂಡ ನಾಶಗೊಂಡಿರುವ ದೃಶ್ಯ ಇನ್ನೂ ಕಾಣಬಹುದು.

ಕಾಲೂರು ಬೆಟ್ಟದ ಕುಸಿತ, ತಮ್ಮ ಮನೆಗಳಿಗೆ ಬರುವ ಮುಖ್ಯರಸ್ತೆ ಸಂಪರ್ಕ ಕಡಿತದ ಆತಂಕದಿಂದ ಭಯಭೀತರಾಗಿ ತಮ್ಮ ಮನೆ ಬಿಟ್ಟು ಹೊರಬಂದ ಮಕ್ಕಂದೂರು ಗ್ರಾಮ ವ್ಯಾಪ್ತಿಯ ರಾಟೆಮನೆ ಪೈಸಾರಿ ಕಾಲೋನಿಯ ಅಂದಾಜು 75 ಕ್ಕೂ ಅಧಿಕ ನಿವಾಸಿಗಳು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ ಕೇಂದ್ರದಲ್ಲಿ ಸಣ್ಣಪುಟ್ಟ ವಿಷಯಕ್ಕೆ ಗೊಂದಲ ಮೂಡಿಸುವದರೊಂದಿಗೆ ಇದೇ ಕಾಲೋನಿಯ 15 ಮಂದಿ ಸಂತ್ರಸ್ತರು ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಪ್ರಕರಣ ಆರೋಪ ಹೊತ್ತು ಜೈಲು ಪಾಲಾಗಿರುವದು ಕೂಡ ಕಾಣಬಹುದು. ಉಳಿದಂತೆ ಹಲವರು ಇನ್ನೂ ವಿವಿಧೆಡೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿರುವದು ಕಂಡುಬಂದಿದೆ.

ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ‘ಶಕ್ತಿ’ ವಾಸ್ತವಾಂಶ ತಿಳಿಯಲು ಮಕ್ಕಂದೂರು ವ್ಯಾಪ್ತಿಯ ರಾಟೆಮನೆ ಪೈಸಾರಿ ಕಾಲೋನಿಗೆ ತೆರಳಿದಾಗ ಅಲ್ಲಿನ ಕಾಲೋನಿಯಲ್ಲಿ ಬೀಗ ಜಡಿದ ಸ್ಥಿತಿಯಲ್ಲಿ 21 ಮನೆಗಳು ತಮ್ಮ ಮಾಲೀಕರ ಆಗಮನಕ್ಕಾಗಿ ಕಾಯುತ್ತಿರುವಂತೆ ಭಾಸವಾಯಿತು. ಮಕ್ಕಂದೂರಿನಿಂದ ತಂತಿಪಾಲ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಈಗಾಗಲೆ ಎಲ್ಲಾ ರೀತಿಯ ಕ್ರಮಕೈಗೊಂಡು ಸಂಚಾರಕ್ಕೆ ಮುಕ್ತಗೊಳಿಸಿದೆ. ಮುಖ್ಯರಸ್ತೆಯಿಂದ ಕಾಲೋನಿಗೆ ತೆರಳುವ ರಸ್ತೆ ಕಾಂಕ್ರೀಟಿಕರಣವಾಗುವದರೊಂದಿಗೆ ಯಾವದೇ ಹಾನಿ ಉಂಟಾಗಿಲ್ಲ. ಕಾಲೋನಿಯ 21 ಮನೆಗಳಲ್ಲಿ ಒಂದು ಮನೆ ಮಾತ್ರ ಸ್ವಲ್ಪ ದುಸ್ಥಿತಿಗೆ ಬಂದಿರುವ ದೃಶ್ಯ ಹೊರತುಪಡಿಸಿದರೆ ಉಳಿದೆಲ್ಲವೂ ವಾಸಕ್ಕೆ ಯೋಗ್ಯವಾಗಿದೆ. ಪ್ರಕೃತಿ ವಿಕೋಪದ ನಡುವೆ ವಿದ್ಯುತ್ ಸಂಪರ್ಕ

(ಮೊದಲ ಪುಟದಿಂದ) ಕಡಿತಗೊಂಡು ಇದುವರೆಗೂ ಸಂಪರ್ಕ ದೊರೆತಿಲ್ಲ ಎನ್ನುವದು ಸಮೀಪದ ಕಾಫಿ ತೋಟದ ಮಾಲೀಕರು ಹಾಗೂ ಮಾಜಿ ಸೈನಿಕರಾದ ಉದಯೆರ ಕಾಳಪ್ಪ ಅವರ ಪತ್ನಿ ಗೌರಮ್ಮ ಅವರ ಅಳಲಾಗಿದೆ. ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಯಾವದೇ ಸಮಸ್ಯೆ ಉಂಟಾಗಿಲ್ಲ ಎನ್ನುತ್ತಾರೆ.

ರಾಟೆಮನೆ ಕಾಲೋನಿಗೆ ನೀರು ಒದಗಿಸಲು ಸ್ಥಳೀಯ ಆಡಳಿತ ಪೈಪ್‍ಗಳನ್ನು ಅಳವಡಿಸಲು ಕಾರ್ಯೋನ್ಮುಖ ರಾಗಿದ್ದು ಕಂಡುಬಂದಿದೆ. ಬೆಟ್ಟದಿಂದ ಹರಿದು ಬರುತ್ತಿರುವ ಶುದ್ಧ ನೀರಿಗೆ ಪೈಪ್ ಅಳವಡಿಸುವ ಮೂಲಕ ತಾತ್ಕಾಲಿಕವಾಗಿ ಗ್ರಾಮಕ್ಕೆ ನೀರು ಒದಗಿಸಲು ಕ್ರಮಕೈಗೊಂಡಿದ್ದಾರೆ. ಆದರೆ ಬಹುತೇಕ ಕೂಲಿ ಕಾರ್ಮಿಕರಾಗಿರುವ ರಾಟೆಮನೆ ಪೈಸಾರಿ ಕಾಲೋನಿಯ 21 ಮನೆಗಳಲ್ಲಿ ಕೇವಲ ಒಂದು ಕುಟುಂಬ ಮಾತ್ರ ಹಿಂತಿರುಗಿ ಬಂದಿರುವದಾಗಿ ಗೌರಮ್ಮ ಮಾಹಿತಿ ನೀಡಿದ್ದು, ಉಳಿದಂತೆ ಎಲ್ಲಾ ಮನೆಗಳು ಕಳೆದ ಒಂದು ತಿಂಗಳಿನಿಂದ ಬೀಗ ಜಡಿದ ದೃಶ್ಯ ಕಂಡುಬಂದಿದೆ. ಮನೆಗಳಲ್ಲಿ ಸಾಕಿದ ಕೋಳಿಗಳು ಮಾತ್ರ ತಮ್ಮ ಆಹಾರವನ್ನು ತಾವೇ ಅರಸುತ್ತಿರುವ ದೃಶ್ಯವೂ ಗೋಚರಿಸಿತು.

ಈ ನಡುವೆ ಈ ಕಾಲೋನಿಯ ಎರಡು ಮನೆಗಳ ಇಬ್ಬರು ಹೆಣ್ಣುಮಕ್ಕಳಿಗೆ ವಿವಾಹ ನಿಶ್ಚಯವಾದಂತೆ ದುರಂತದ ಎಡೆಯಲ್ಲಿ ಯಾವದೇ ವಿಘ್ನವಿಲ್ಲದೆ ಜಿಲ್ಲಾಡಳಿತ ಮತ್ತು ಮಡಿಕೇರಿಯ ಸಂಘಸಂಸ್ಥೆಗಳು, ದಾನಿಗಳ ಸಹಕಾರದೊಂದಿಗೆ ನಡೆದಿರುವದನ್ನು ಇಲ್ಲಿ ಸ್ಮರಿಸಬಹುದು. ಕಾಲೋನಿಯ ಮಂಜುಳಾ ಮತ್ತು ರಂಜಿತಾ ಅವರ ಕಂಕಣಭಾಗ್ಯ ಮಡಿಕೇರಿಯಲ್ಲಿ ನಡೆದಿದ್ದು, ರಾಜ್ಯ ಸರಕಾರದ ಸಚಿವರುಗಳ ಧನ ಸಹಾಯ ಮತ್ತು ದೇವಾಲಯ ಸಮಿತಿ, ಸೇವಾ ಭಾರತಿ ಕಾರ್ಯಕರ್ತರು ಲಯನ್ಸ್ ಕ್ಲಬ್, ಬ್ರಾಹ್ಮಣ ಸಂಘಗಳು ಮತ್ತಿತರರ ದಾನಿಗಳ ಸಹಕಾರದೊಂದಿಗೆ ನೆರವೇರಿದೆ.

ಸಮಸ್ಯೆಯನ್ನು ಶಾಶ್ವತವಾಗಿ ತಮ್ಮೊಂದಿಗೆ ಇರಿಸಿಕೊಂಡು ಗೊಂದಲ ಸೃಷ್ಟಿ ಮಾಡಿಕೊಳ್ಳುವ ಬದಲು ತಮ್ಮ ನೆಲೆಗೆ ಹಿಂತಿರುಗುವದು ಒಳಿತು ಎಂದು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾಟೆಮನೆ ಪೈಸಾರಿ ಕಾಲೋನಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವದರೊಂದಿಗೆ ಸುಸ್ಥಿತಿಯಲ್ಲಿರುವ ಮನೆಗಳಿಗೆ ಸಂತ್ರಸ್ತರನ್ನು ಆಶ್ರಯ ಕೇಂದ್ರದಿಂದ ಸ್ಥಳಾಂತರಿಸುವದು ಹಾಗೂ ಅರ್ಹ ಫಲಾನುಭವಿಗಳಿಗೆ ಬದಲೀ ನೆಲೆ ಕಲ್ಪಿಸುವತ್ತ ಕೂಡಲೆ ಚಿಂತನೆ ಹರಿಸಬೇಕಾಗಿದೆ.