ಮಡಿಕೇರಿ, ಸೆ.26 : ಔಷಧಿಗಳ ವಿತರಣಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಇ-ಫಾರ್ಮಸಿ ಕ್ರಮದ ಲೋಪಗಳನ್ನು ವಿರೋಧಿ ಮತ್ತು ಅಗತ್ಯ ತಿದ್ದುಪಡಿಗಳಿಗಾಗಿ ಆಗ್ರಹಿಸಿ ರಾಷ್ಟ್ರವ್ಯಾಪಿ ಸೆ.28 ರಂದು ನಡೆಯುವ ಔಷಧಿ ವ್ಯಾಪಾರಿಗಳ ಬಂದ್ ಮುಷ್ಕರಕ್ಕೆ ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ತನ್ನ ಬೆಂಬಲವನ್ನು ನೀಡಲಿದೆ ಎಂದು ಸಂಘದ ಅಧ್ಯಕ್ಷ ಎ.ಕೆ.ಜೀವನ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶುಕ್ರವಾರ ರಾಷ್ಟ್ರ ವ್ಯಾಪಿ ಇರುವ 8.5 ಲಕ್ಷ ಔಷಧಿ ವ್ಯಾಪಾರಿಗಳು, ರಾಜ್ಯದ 20 ಸಾವಿರ ಹಾಗೂ ಜಿಲ್ಲೆಯ 120 ಔಷಧಿ ವ್ಯಾಪಾರಿಗಳು ತಮ್ಮ ಔಷಧಿ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್ ನಡೆಸಲಿದ್ದಾರೆ ಎಂದರು. ಆಸ್ಪತ್ರೆಗಳಲ್ಲಿರುವ ಔಷಧಿ ಅಂಗಡಿಗಳು ತೆರೆದಿರುತ್ತವೆ ಎಂದು ಸ್ಪಷ್ಟಪಡಿಸಿದರು. ಇ-ಫಾರ್ಮಸಿ ಎಂಬ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಅವರು, ಈ ಹೊಸ ನೀತಿಯ ಬಗ್ಗೆ ಗ್ರಾಹಕರಿಗೆ ವಾಸ್ತವಾಂಶ ತಿಳಿಸಬೇಕಾದ ಮಹತ್ವದ ಹೊಣೆಗಾರಿಕೆ ಔಷಧಿ ವ್ಯಾಪಾರಸ್ಥರ ಮೇಲಿರುವದರಿಂದ ಮುಷ್ಕರ ನಡೆಸುತ್ತಿರುವದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ಇ-ಫಾರ್ಮಸಿಗೆ ಸಂಬಂಧಿಸಿದಂತೆ ಕರಡು ನೋಟಿಫಿಕೇಶನ್ ಹೊರಡಿಸಿದ್ದು, ಇದಕ್ಕೆ ಈಗಾಗಲೆ ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. ನಕಲಿ ಹಾಗೂ ಮಾದಕ ಔಷಧಗಳ ವ್ಯಾಪಾರ ಇತಿಮಿತಿಯಿಲ್ಲದಂತೆ ನಡೆಯಲು ನೂತನ ವ್ಯವಸ್ಥೆ ರಹದಾರಿಯಾಗಿದ್ದು, ಬೇರೆ ಔಷಧದ ಹೆಸರಿನಲ್ಲಿ ಮಾದಕ ಜೌಷಧ ವಿತರಣೆಯಾದಲ್ಲಿ

(ಮೊದಲ ಪುಟದಿಂದ) ಯುವ ಪೀಳಿಗೆ ಬಲಿಪಶುಗಳಾಗಲಿದ್ದಾರೆ ಎಂದು ಜೀವನ್ ಅಸಮಾಧಾನ ವ್ಯಕ್ತಪಡಿಸಿದರು.

ಇ-ಫಾರ್ಮಸಿ ವ್ಯವಸ್ಥೆ ರೋಗಿಯ ಆರೋಗ್ಯದ ಬಗ್ಗೆ, ವಿತರಣೆ ಆಗಬೇಕಾದ ಔಷಧದ ಗುಣಮಟ್ಟದ ಪರಿಶೀಲನೆಗೆ ಒತ್ತು ನೀಡದೆ ಗ್ರಾಹಕರ ಜೀವನದ ಜೊತೆ ಆಟವಾಡುವ ಪ್ರಕ್ರಿಯೆಯಾಗಿದೆ. ವಿತರಕ ಯಾರು ಎಂಬವದನ್ನೇ ಅರಿಯದೇ, ಔಷಧಿಯ ವಿಷಯವನ್ನೇ ತಿಳಿಯದವರು ಇ-ಫಾರ್ಮಸಿ ವ್ಯವಸ್ಥೆಯಡಿ ಔಷಧಿಗಳನ್ನು ಎಲ್ಲಿಂದಲೋ ವಿತರಣೆ ಮಾಡಿದಲ್ಲಿ ಗ್ರಾಹಕನ ಆರೋಗ್ಯ ಸಂಪೂರ್ಣ ಹದಗೆಡುವ ಸಾಧ್ಯತೆ ಹೆಚ್ಚಿದೆ.

ಡಾಕ್ಟರ್‍ರ ಔಷಧ ಚೀಟಿಯನ್ನು ಇ-ಫಾರ್ಮಸಿ ಪೋರ್ಟಲ್‍ಗೆ ತಾವೇ ತುಂಬಬೇಕಾಗಿದ್ದು, ತಮಗೆ ತಲುಪಬಹುದಾದ ಔಷಧವು, ತಮಗೆ ವೈದ್ಯರ ಸಲಹೆಯಂತೆಯೇ ದೊರೆಯುವದೆಂಬ ಖಾತ್ರಿ ಇಲ್ಲ. ಜೌಷಧವನ್ನು ಸ್ವ ಹಸ್ತದಿಂದ ತಲಪಿಸಬೇಕಾದ ನಿಯಮ ಇ-ಫಾರ್ಮಸಿಗೆ ಅನ್ವಯವಾಗಿಲ್ಲ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಔಷಧಗಳಿಗೆ ಕೇಂದ್ರ ಸರಕಾರದ ಆದೇಶದಂತೆ ಶೇ.16ರಷ್ಟು ಲಾಭಂಶ ಮಾತ್ರ ಲಭ್ಯವಿದೆ. ಆದರೆ, ಇ- ಫಾರ್ಮಸಿಗಳು ಶೇ.60 ರಿಂದ ಶೇ.70 ರಿಯಾಯಿತಿ ದರದಲ್ಲಿ ಔಷಧಿ ನೀಡುವ ಜಾಹೀರಾತು ನೀಡುತ್ತಿದ್ದಾರೆ. ಇಷ್ಟೊಂದು ರಿಯಾಯಿತಿಯಲ್ಲಿ ನೀಡುವ ಔಷಧಿಗಳ ಗುಣಮಟ್ಟ ಉತ್ತಮವಾಗಿರಲು ಸಾಧ್ಯವೆ ಎಂದು ಜೀವನ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಡಿ.ಐ. ಪುರುಷೋತ್ತಮ, ಜಿಲ್ಲಾ ಉಪಾಧ್ಯಕ್ಷ ಎ.ಕೆ.ವಿನೋದ್, ಖಜಾಂಚಿ ಪ್ರಸಾದ್ ಗೌಡ ಹಾಗೂ ಜಂಟಿ ಕಾರ್ಯದರ್ಶಿ ಬಿ.ಸಿ.ತಿಲಕ್ ಉಪಸ್ಥಿತರಿದ್ದರು.