ಮಡಿಕೇರಿ, ಸೆ. 25: ಸಮಾಜದಲ್ಲಿ ಶೋಷಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಬ್ಬಾಳಿಕೆ, ಶೋಷಣೆ, ದೌರ್ಜನ್ಯವನ್ನು ಪ್ರಶ್ನಿಸಿದರೆ, ಅದು ಭಯೋತ್ಪಾದನೆ ಹೇಗೆ ಆಗುತ್ತದೆ ? ಪಿಎಫ್‍ಐ ಭಯೋತ್ಪಾದಕ ಸಂಘಟನೆ ಅಲ್ಲವೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಪ್ರತಿಪಾದಿಸಿದರು.ಸಂಘಟನೆ ವತಿಯಿಂದ ‘ಮೂವ್‍ಮೆಂಟ್ ಫಾರ್ ರೈಟ್ಸ್ ಅಂಡ್ ಜಸ್ಟೀಸ್’ ಎಂಬ ವಿಷಯದಡಿ ಏರ್ಪಡಿಸಿದ್ದ ಮಾಧ್ಯಮ ಸ್ನೇಹಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಿಎಫ್‍ಐ ಅನ್ನು ಭಯೋತ್ಪಾದಕ ಸಂಘಟನೆ ಎಂದು ಬಿಂಬಿಸಲಾಗುತ್ತಿದೆ. ಲವ್ ಜಿಹಾದ್ ಹಾಗೂ ಬಲವಂತದ ಮತಾಂತರ ಮಾಡುವ ಸಂಘಟನೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ ಯಾವದೇ ಆರೋಪಗಳಿಗೂ ಯಾವದೇ ಸಾಕ್ಷಾಧಾರಗಳನ್ನು ಒದಗಿಸಲು ಆರೋಪ ಮಾಡುವವರಿಗೆ ಸಾಧ್ಯವಾಗುತ್ತಿಲ್ಲ. ಆರ್‍ಎಸ್‍ಎಸ್ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ ಶಾಹಿ ಆಡಳಿತ ತರಲು ಹವಣಿಸುತ್ತಿದೆ. ಶೋಷಿತರ, ಪರಿಶಿಷ್ಟರ, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಇವರುಗಳ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯವನ್ನು ಪ್ರಶ್ನಿಸಿದರೆ, ಅದು ಹೇಗೆ ಭಯೋತ್ಪಾದನೆ ಆಗುತ್ತದೆ ಎಂದು ಪ್ರಶ್ನಿಸಿದರು.

ಮುಸ್ಲಿಂ ಸಮಾಜ ಒಂದು ರಾಜಕೀಯ ಪಕ್ಷದ ಗುಲಾಮವಾಗಿತ್ತು. ಸಮಾಜದ

(ಮೊದಲ ಪುಟದಿಂದ) ಸಂಘಟನೆಗಳೆಲ್ಲವೂ ಧಾರ್ಮಿಕ ಸಂಘಟನೆಗಳಾಗಿವೆ. ಸಮಾಜದ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಪ್ರಶ್ನಿಸುವ, ಹೋರಾಟ ಮಾಡುವ ನಮ್ಮ ಹಕ್ಕನ್ನು ಪ್ರತಿಪಾದಿಸುವ ಮನೋಭಾವ ಕಡಿಮೆಯಿತ್ತು. ಇಂತಹ ಸನ್ನಿವೇಶದಲ್ಲಿ ಸಂಘಟಿತ ಹೋರಾಟದ ರೂಪಕೊಟ್ಟು, ದೌರ್ಜನ್ಯದ ವಿರುದ್ಧ ಮಾತನಾಡುವ ನಿಟ್ಟಿನಲ್ಲಿ ರೂಪುರೇಷೆÉ ಹಾಕಿಕೊಡಲಾಗಿದೆ ಎಂದು ವಿಶ್ಲೇಷಿಸಿದರು.

ಆರ್‍ಎಸ್‍ಎಸ್ ಸಿದ್ಧಾಂತವನ್ನು ಪಿಎಫ್‍ಐ ವಿರೋಧಿಸುತ್ತಿದ್ದು, ಎಲ್ಲರನ್ನೊಳಗೊಂಡ ಸಿದ್ಧಾಂತವಿರಬೇಕು, ಜನರನ್ನು ಒಡೆಯುವ, ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡುವ ಸಿದ್ಧಾಂತವನ್ನು ವಿರೋಧಿಸುವದಾಗಿ ಹೇಳಿದರು. ಸಂಘಟನೆ ಮೂಲಕ ಮುಸ್ಲಿಂ ಸಮಾಜದ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೌರ್ಜನ್ಯಕ್ಕೊಳಗಾದವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗುತ್ತಿದೆ. ಹಾಗಾಗಿ ಅಕ್ರಮ, ಹಿಂಸೆ, ದೌರ್ಜನ್ಯ ಮಾಡುವವರಿಗೆ ಸಹಿಸಲಾಗುತ್ತಿಲ್ಲ. ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದರು. ಪಿಎಫ್‍ಐ ಬಂದ ನಂತರ ಕರಾವಳಿ ಭಾಗದಲ್ಲಿ ಕಳೆದ 10 ವರ್ಷಗಳಿಂದ ಕೋಮುಗಲಭೆ ಕಡಿಮೆಯಾಗಿದೆ. ಮುಸ್ಲಿಂ ಯುವಕರಲ್ಲಿ ಜಾಗೃತಿ ಮೂಡಿಸಿರುವದರಿಂದ ಗಲಭೆಗಳಾಗಿಲ್ಲವೆಂದು ಅಭಿಪ್ರಾಯಿಸಿದರು.

ಸಮಾರೋಪ ಭಾಷಣ ಮಾಡಿದ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೋಹಿಸಿನ್ ಮಾನವ ಹಾಗೂ ಸಮಾಜದ ನಡುವೆ ಮಾಧ್ಯಮ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಮಾಧ್ಯಮದವರು ಹಾಗೂ ಹೋರಾಟಗಾರರು ಇಂದು ಸಮಸ್ಯೆಯಲ್ಲಿದ್ದೇವೆ. ಆದರೂ ಯಾವದೇ ಬೇಧ - ಭಾವವಿಲ್ಲದೆ ಮಾಧ್ಯಮಗಳು ಜನರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುತ್ತಿರುವದು ಶ್ಲಾಘನೀಯವೆಂದು ಹೇಳಿದರು. ಪಿಎಫ್‍ಐ ಹಾಗೂ ಎಸ್‍ಡಿಪಿಐ ಜನಪರ ಕಾಳಜಿ ಹೊಂದಿರುವ ಹೋರಾಟದ ಸಂಘಟನೆಗಳಾಗಿವೆ. ಇಲ್ಲಿ ಯಾವದೇ ಕೋಮುವಾದ ಇಲ್ಲ. ದೌರ್ಜನ್ಯಕ್ಕೊಳಗಾದ ಜನತೆಯ ಧ್ವನಿಯಾಗಿ ಹಕ್ಕು ಪಡೆಯಲು, ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು. ಕೆಲವರು ಅಪಪ್ರಚಾರದೊಂದಿಗೆ ಹೋರಾಟ ಮಾಡುವವರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ. ಇದು ಸರಿಯಲ್ಲ ಹೋರಾಟದ ವಿಚಾರಗಳು ಜೀವಂತವಾಗಿದ್ದರೆ ಮಾತ್ರ ಪರಿಹಾರ ಕಾಣಲು ಸಾಧ್ಯವೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಿಎಫ್‍ಐ ಜಿಲ್ಲಾಧ್ಯಕ್ಷ ಆರಿಸ್ ತಣ್ಣೀರುಹಳ್ಳ ಹತ್ತು ವರ್ಷಗಳಿಂದ ದೌರ್ಜನ್ಯಕ್ಕೊಳಗಾದವರ ಪರ ಕಾನೂನಾತ್ಮಕ ಹಾಗೂ ಪ್ರತಿಭಟನಾತ್ಮಕ ಹೋರಾಟಗಳ ಮೂಲಕ ಸಂಘಟನೆ ಜನರ ಧ್ವನಿಯಾಗಿ ಕಾರ್ಯಾಚರಿಸುತ್ತಿದೆ. ಜನತೆಗೆ ನ್ಯಾಯ ದೊರಕಿಸಿಕೊಡುವ ಹಾದಿಯಲ್ಲಿ ಹಲವು ಎಡರು - ತೊಡರುಗಳನ್ನು ಶ್ರಮಿಸಿ, ಆರೋಪ, ಅಪಪ್ರಚಾರಗಳಿದ್ದರೂ ರಾಷ್ಟ್ರಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು. ಅಪವಾದ, ಸಮಾಜವನ್ನು ಸ್ವೀಕರಿಸುತ್ತಾ ಮುನ್ನುಗ್ಗುತ್ತಿರುವ ಸಂಘಟನೆಯಾಗಿದೆ ಎಂದರು. ಸಂಘಟನೆಯ ಪ್ರಮುಖ ರಿಯಾಜ್ ಸ್ವಾಗತಿಸಿ, ಕಬೀರ್ ನಿರೂಪಿಸಿ, ವಂದಿಸಿದರು.