ಮಡಿಕೇರಿ, ಸೆ. 25 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ಕೊಡಗು ಜಿಲ್ಲಾ ಪಂಚಾಯತ್, ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಕಾರ್ಯಕ್ರಮದಡಿ ಅಂತ್ಯೋದಯ ದಿನಾಚರಣೆ ಮಂಗಳವಾರ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ ಮಿಶ್ರ ಅವರು ಗ್ರಾಮೀಣ ಯುವ ಜನತೆಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ನೋಂದಾವಣೆ ಮಾಡಿಕೊಂಡ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗವನ್ನು ಪಡೆಯಬೇಕು. ಈ ತರಬೇತಿ ಅವಧಿಯಲ್ಲಿ ನೀಡುವ ತರಬೇತಿಯಿಂದ ಯುವ ಜನತೆ ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.ಜಿ.ಪಂ.ಉಪ ಕಾರ್ಯದರ್ಶಿ ಭೀಮಸೇನ ಅವರು ಮಾತನಾಡಿ 18 ವರ್ಷದಿಂದ 35 ವರ್ಷದೊಳಗಿನ ನಿರುದ್ಯೋಗಿ ಫಲಾನುವಿಗಳಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಲಾಗುವದು. ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 29 ರ ತನಕ ಎಲ್ಲಾ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಸುಮಾರು 30 ರಿಂದ 35 ವೃತ್ತಿಗಳು ಈ ತರಬೇತಿಯಲ್ಲಿ ಒಳಗೊಂಡಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಲಾಉದ್ದೀನ್, ಟಿಂ ಲೀಸ್ ಸಂಸ್ಥೆಯ ಅರುಣ್ ಇತರರು ಇದ್ದರು.