ಗೋಣಿಕೊಪ್ಪ ವರದಿ, ಸೆ. 25: ಬಡವರಿಗೆ ಸಿಗಬೇಕಾದ ಅಕ್ಕಿ ಮತ್ತು ಸೀಮೆಎಣ್ಣೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದ ಘಟನೆ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾ. ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸದಸ್ಯರುಗಳು ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಯಾಗುವ ಪಡಿತರ ನಿರ್ದಿಷ್ಟ ಪ್ರಮಾಣದಲ್ಲಿ ಇರುವದಿಲ್ಲ. ಇದು ಪಲಾನುಭವಿಗಳಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಗಮನಹರಿಸಲಾಗುವದು ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು. ವೀರಾಜಪೇಟೆ ತಾಲೂಕಿನಲ್ಲಿ ಅತೀವೃಷ್ಟಿಯಿಂದ (ಮೊದಲ ಪುಟದಿಂದ) 508 ಮನೆ ದುರಸ್ಥಿ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ನೀಡಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು. ಸಿದ್ದಾಪುರ, ಹಾಲುಗುಂದ, ಕುಂದ, ಕಟ್ಟ ಸೇರಿದಂತೆ 9 ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಅನುದಾನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪೊನ್ನಂಪೇಟೆಯಲ್ಲಿ ಪಶು ವೈದ್ಯಾಧಿಕಾರಿ ಇರುವದಿಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ವೈದ್ಯರನ್ನು ನೇಮಿಸಬೇಕು ಎಂದು ತಾ.ಪಂ ಸದಸ್ಯೆ ಆಶಾ ಪೂಣಚ್ಚ ಒತ್ತಾಯಿಸಿದರು. ಅಧಿಕಾರಿಗಳ ಕೊರತೆಯಿಂದ ಸಮಸ್ಯೆಯಾಗಿದೆ ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವದು ಎಂದು ಪಶುಸಂಗೋಪನ ಇಲಾಖೆ ಅಧಿಕಾರಿ ಹೇಳಿದರು. ತೋಟಗಾರಿಕಾ ಇಲಾಖೆಯಿಂದ ಕಾಳು ಮೆಣಸಿನ ಬಳ್ಳಿಗಳನ್ನು ವಿತರಿಸಲಾಗುವದು ಎಂದು ಇಲಾಖೆ ಅಧಿಕಾರಿ ಹೇಳಿದರು. ತಾ. ಪಂ ಉಪಾಧ್ಯಕ್ಷ ನೆಲ್ಲೀರ ಚಲನ್ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿ ಈ ಸಮಯದಲ್ಲಿ ಮೆಣಸಿನ ಬಳ್ಳಿಯನ್ನು ವಿತರಿಸುವದರಿಂದ ಯಾವದೇ ಪ್ರಯೋಜನವಿಲ್ಲ. ಅಡಿಕೆ ಅಥವಾ ಬಟರ್ ಫ್ರೂಟ್ ಗಿಡಗಳನ್ನು ಮುಂದಿನ ಯೋಜನೆಯಲ್ಲಿ ವಿತರಿಸುವಂತೆ ಸೂಚಿಸಿದರು. ತಾ. ಪಂ ಸದಸ್ಯ ಅಜೀತ್ ಕರುಂಬಯ್ಯ ಮಾತನಾಡಿ, ತಾಲೂಕಿನ ಹಲವು ಔಷಧಿ ಮಳಿಗೆಗಳಲ್ಲಿ ಮತ್ತೇರುವಂತ ಔಷಧಿಗಳನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಮತ್ತು ಔಷಧಿ ಮಳಿಗೆಗಳಲ್ಲಿ ಫಾರ್ಮಸಿ ಓದಿರುವವರನ್ನು ನೇಮಿಸಿಕೊಳ್ಳುತ್ತಿಲ್ಲ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿದರು.

ಶಿಕ್ಷಣ ಇಲಾಖೆಯಿಂದ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಲೊಕೇಶ್ ಮಾಹಿತಿ ನೀಡಿದರು. ಕಿರಿಯ ಪುರುಷ ಆರೋಗ್ಯ ಸಹಾಯಕರು ಸಾಂಕ್ರಾಮಿಕ ರೋಗ ಹರಡದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ವೈಧ್ಯಾದಿಕಾರಿ ಡಾ. ಯತೀರಾಜ್ ಹೇಳಿದರು.ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಜೆನಿಸ್ ಉಪಸ್ಥಿತರಿದ್ದರು. ವರದಿ- ಸುದ್ದಿಪುತ್ರ