ಸೋಮವಾರಪೇಟೆ, ಸೆ. 25: ತಾಲೂಕಿನ ತಣ್ಣೀರುಹಳ್ಳ ಗ್ರಾಮದ ನಿವಾಸಿ, ಪುತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ತನ್ನ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಮೀಪದ ತಣ್ಣೀರುಹಳ್ಳ ಗ್ರಾಮದ ಅಂಗಾರ (ಅಣ್ಣಪ್ಪ) ಹಾಗೂ ಪುಷ್ಪ ದಂಪತಿ ಪುತ್ರಿ, ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಟಿ.ಎ. ಜೀವಿತ ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಪುತ್ತೂರಿನ ನರಿಮೊಗರು ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ದ ಜೀವಿತ, ನಿನ್ನೆ ರಾತ್ರಿ ಹಾಸ್ಟೆಲ್ ನ ಒಳಗೆ ನೈಲಾನ್ ಹಗ್ಗ ದಿಂದ ನೇಣು ಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಾಳೆ. ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ತಣ್ಣೀರುಹಳ್ಳ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪುತ್ತೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.