ವೀರಾಜಪೇಟೆ, ಸೆ. 24: ವೀರಾಜಪೇಟೆಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ವಿಸರ್ಜನೋತ್ಸವ ಈ ಬಾರಿ ಅದ್ದೂರಿ ಆಡಂಬರವಿಲ್ಲದೆ ಮನರಂಜನೆಯ ಸದ್ದು ಗದ್ದಲವಿಲ್ಲದೆ ಸರಳ ಹಾಗೂ ಸಂಪ್ರದಾಯ ಬದ್ದವಾಗಿ ನಡೆಯಿತು. ಪಟ್ಟಣದ 21 ಉತ್ಸವ ಸಮಿತಿಗಳು ಸಾಮೂಹಿಕ ಮೆರವಣಿಗೆ ಯೊಂದಿಗೆ ಇಂದು ಬೆಳಿಗ್ಗೆ 6ಗಂಟೆ ವೇಳೆಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಗೌರಿಕೆರೆಯಲ್ಲಿ ಗೌರಿ ಗಣೇಶ ವಿಸರ್ಜನೆ ಮಾಡಿದವು. ಬೆಳಗ್ಗಿನ ಜಾವ 3 ಗಂಟೆಗೆ ಸುರಿದ ಮಳೆಯಿಂದಾಗಿ ಸಾಮೂಹಿಕ ಮೆರವಣಿಗೆಗೆ ಕೆಲವು ಸಮಯ ಅಡಚಣೆ ಯಾದರೂ ಎಲ್ಲಾ ಮಂಟಪಗಳು ನಿರಾತಂಕವಾಗಿ ಸರದಿಯಂತೆ ಗೌರಿಕೆರೆಯಲ್ಲಿ ಮೂರ್ತಿಗಳ ವಿಸರ್ಜನೆಯಲ್ಲಿ ತೊಡಗಿದವು.

ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ರಾತ್ರಿ 8-55ಗಂಟೆಗೆ ಗಣೇಶನಿಗೆ ಪೂಜಾ ಸೇವೆಯೊಂದಿಗೆ ಗಣೇಶನನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕೂರಿಸುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿಯ 101 ಈಡುಗಾಯಿ ಸೇರಿದಂತೆ ಭಕ್ತಾದಿಗಳು ಸಹಸ್ರಾರು ಈಡುಗಾಯಿಗಳನ್ನು ಅರ್ಪಿಸಿದರು. ಈ ಸಂದರ್ಭ ಪೊಲೀಸರು ಭಕ್ತಾದಿಗಳನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕಾಯಿತು. ಭಕ್ತಾದಿಗಳ ಪೂಜೆ ದೇವರ ಸ್ಮರಣೆಯೊಂದಿಗೆ ರಾತ್ರಿ 10.20ಗಂಟೆಗೆ ಪ್ರಥಮವಾಗಿ ಗಣಪತಿ ದೇವಾಲಯದಿಂದ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗಣಪತಿ ದೇವಾಲಯದ ಮಂಟಪ ಇಲ್ಲಿನ ಜೈನರಬೀದಿಯ ಬಸವೇಶ್ವರ ದೇವಾಲಯಕ್ಕೆ ತಲಪುತ್ತಿದ್ದಂತೆ ರಾತ್ರಿ 11.35ಗಂಟೆಗೆ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯ ಮಂಟಪ ಮುನ್ನಡೆಗೆ ಚಾಲನೆ ನೀಡಿತು. ಈ ಎರಡು ಮಂಟಪಗಳ ಹಿಂದೆ ಸರದಿ ಪ್ರಕಾರ ಇತರ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದವು. ಸಾಮೂಹಿಕ ಮೆರವಣಿಗೆ ಇಲ್ಲಿನ ಸಿದ್ದಾಪುರ ರಸ್ತೆಯ ತಿರುವಿಗೆ ಬರುವಷ್ಟರಲ್ಲಿ ಮಧ್ಯ ರಾತ್ರಿ ಎರಡು ಗಂಟೆ ದಾಟಿತ್ತು. ಹದಿನೈದರ ನಂತರದ ಸರದಿಯ ಮಂಟಪಗಳು ಸಿದ್ದಾಪುರ ರಸ್ತೆಯ ತಿರುವಿಗೆ ಬರುವಷ್ಟರಲ್ಲಿ ಬೆಳಗಿನ ಮೂರು ಗಂಟೆ ಕಳೆದಿತ್ತು. ಗೌರಿಕೆರೆಯಲ್ಲಿ ವಿಸರ್ಜನೋತ್ಸವವು ಬೆಳಗಿನ 8-30 ರ ತನಕವೂ ನಡೆಯಿತು.

21 ಮಂಟಪಗಳ ಪೈಕಿ ದುಂದು ವೆಚ್ಚವಿಲ್ಲದ ಹೂವಿನ ಅಲಂಕೃತ ಮಂಟಪದಲ್ಲಿ ಕೆಲವು ಉತ್ಸವ ಸಮಿತಿಗಳು ಗಣೇಶನ ಮೂರ್ತಿಯನ್ನು ಕೂರಿಸಿದ್ದವು. ಅಧಿಕ ಮಂಟಪಗಳು ಆರು ಅಡಿಯಿಂದ ಎಂಟು ಅಡಿಗಳವರೆಗಿನ ಕಡಿಮೆ ವೆಚ್ಚದ ವಿದ್ಯುತ್ ಅಲಂಕೃತ ಮಂಟಪ ಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವರ್ಷಂಪ್ರತಿ ಸಿಡಿ ಮದ್ದುಗಳ ಪ್ರದರ್ಶನ ನೀಡುತ್ತಿದ್ದ ಗಣಪತಿ ದೇವಾಲಯ ಹಾಗೂ ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಸಿಡಿ ಮದ್ದು ಪ್ರದರ್ಶನವನ್ನು ಹಾಗೂ ಎಲ್ಲ ಮನರಂಜನೆಯನ್ನು ಕೈಬಿಡಲಾಗಿತ್ತು. ಸುಮಾರು 9 ಮಂಟಪಗಳು ಡಿ.ಜೆ. ಸೌಂಡ್ ಸಿಸ್ಟಮ್ ವ್ಯವಸ್ಥೆಗೊಳಿಸಿದ್ದವು.

ರಾತ್ರಿ 7ಗಂಟೆಗೆ ಆರಂಭಿಸಿದ ಇಲ್ಲಿನ ತೆಲುಗರ ಬೀದಿಯ ಉತ್ಸವ ಸಮಿತಿಗೆ ಡಿ.ಜೆ ವ್ಯವಸ್ಥೆಗೆ ನಿಲ್ಲಿಸುವಂತೆ ಡಿ.ವೈಎಸ್‍ಪಿ ವಿನಂತಿಸಿದರೂ ಸಮಿತಿಯವರು ಪ್ರತಿ ವರ್ಷದಂತೆ ಈ ವರ್ಷವೂ ಈ ವ್ಯವಸ್ಥೆ ಮಾಡಿ ಕೊಂಡಿರುವದಾಗಿ ಸಮಜಾಯಿಷಿಕೆ ನೀಡಿ ಮುಂದುವರೆದರು.

ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋ ಬಸ್ತ್‍ನಲ್ಲಿ ಮಹಿಳಾ ಪೊಲೀಸರು, ಹೋಮ್‍ಗಾರ್ಡ್‍ಗಳು, ಹೊರಗಿನ ಹಾಗೂ ಸ್ಥಳೀಯ ಪೊಲೀಸರು, ಅಧಿಕಾರಿಗಳು, ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸರು ಭಾಗವಹಿಸಿದ್ದರು.

ಗೌರಿ ಗಣೇಶ ವಿಸರ್ಜನೋತ್ಸವದ ಸಾಮೂಹಿಕ ಮೆರವಣಿಗೆಯಲ್ಲಿ ಜೈನರಬೀದಿಯ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿ, ಗಡಿಯಾರ ಕಂಬದ ಬಳಿಯ ಗಣಪತಿ ಸೇವಾ ಟ್ರಸ್ಟ್, ತೆಲುಗರ ಬೀದಿಯ ಅಂಗಾಳ ಪರಮೇಶ್ವರಿ ವಿನಾಯಕ ಯುವಕ ಭಕ್ತ ಮಂಡಳಿ, ಪಂಜರು ಪೇಟೆ ಗಣಪತಿಬೀದಿಯ ಮಹಾ ಗಣಪತಿ ಸೇವಾ ಸಮಿತಿ, ಪಂಜರು ಪೇಟೆಯ ವಿನಾಯಕ ಸೇವಾ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಸುಣ್ಣದ ಬೀದಿಯ ಹರಿಕೇರಿಯ ದೊಡ್ಡಮ್ಮ-ಚಿಕ್ಕಮ್ಮ ತಾಯಿ ವಿನಾಯಕ ಉತ್ಸವ ಸಮಿತಿ, ನೆಹರು ನಗರದ ನೇತಾಜಿ ಯುವಕ ಸಂಘದ ಗಣೇಶ ಉತ್ಸವ ಸಮಿತಿ. ಚಿಕ್ಕಪೇಟೆಯ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ದಖ್ಖನ್ನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಗಣೇಶ ಉತ್ಸವ ಸಮಿತಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಉತ್ಸವ ಸಮಿತಿ, ಕುಕ್ಲೂರುವಿನ ವಿಘ್ನೇಶ್ವರ ಸೇವಾ ಸಮಿತಿ, ಪಟ್ಟಣ ಪಂಚಾಯಿತಿಯ ಪೌರ ಸೇವಾ ನೌಕರರ ಗಣೇಶೋತ್ಸವ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ಅರಸು ನಗರದ ವಿಘ್ನೇಶ್ವರ ಸೇವಾ ಸಮಿತಿ, ಗೌರಿಕೆರೆ ಗೌರಿ ಗಣೇಶ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿಗಳು ಪಾಲ್ಗೊಂಡಿದ್ದವು.

- ಡಿ.ಎಂ.ಆರ್.