ಮಡಿಕೇರಿ, ಸೆ. 24: ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪಕ್ಕೆ ಗ್ರಾಮಕ್ಕೆ ಗ್ರಾಮಗಳೇ ನಾಶವಾದವು. ಜನ ಮನೆ-ಮಠ, ಆಸ್ತಿ- ಪಾಸ್ತಿ, ತೋಟ, ತೊಡಿಗೆಗಳನ್ನು ಕಳೆದುಕೊಂಡು ಬದುಕನ್ನೇ ಕಳೆದುಕೊಂಡರು. ಎಷ್ಟೋ ಜೀವಹಾನಿ ಸಂಭವಿಸಿತು. ನಾಳೆಯ ಊಟಕ್ಕೇನು ಎಂಬಂತಹ ಪರಿಸ್ಥಿತಿಯಲ್ಲಿ ದೈವ ಸಹಾಯವೆಂಬಂತೆ ನೆರವಿನ ಮಹಾಪೂರವೇ ಕೊಡಗಿನೆಡೆಗೆ ಹರಿದು ಬಂತು.

ಇಂತಹ ಸನ್ನಿವೇಶದಲ್ಲಿ ಕಾಲೂರು ಗ್ರಾಮ ನಲುಗಿಹೋದ ಸಂದರ್ಭದಲ್ಲಿ ಚೇಲಾವರ ಗ್ರಾಮದ ಪಟ್ಟಚೆರವಂಡ ರೇಖಾ, ಪುನೀತಾ, ಸಂಗೀತಾ, ಜೈನೀರ ಬೇಬಿ ಎಂಬ ಸಹೃದಯಿಗಳಿಗೆ ಹೊಸ ಆಲೋಚನೆಯೊಂದು ಉದಿಸಿದ ಪರಿಣಾಮ, ಶ್ರೀದೇವಿ, ಶ್ರೀನಿವಾಸ, ಜಲಾನಯನ, ಈಶ್ವರ, ತಿರುಪತಿ, ಪೊನ್ನೋಲ ಸ್ವಸಹಾಯ ಸಂಘದವರು ಜೊತೆಯಾಗಿ ಸುಮಾರು 52 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದರು. ಬೆಂಗಳೂರಿನಲ್ಲಿರುವ ರಮ್ಯ ಸುಬ್ಬಯ್ಯ, ಚಿತ್ರಾ ಶೇಖರ್, ಮಾಳ್ಗಿ, ಹುವಾವಿ ಕನ್ನಡ ಸಂಘದವರು ಸುಮಾರು 3 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು.

ಈ ಎಲ್ಲಾ ಸಹೃದಯಿ ದಾನಿಗಳು ಕಾಲೂರು ಗ್ರಾಮಕ್ಕೆ ಖುದ್ದಾಗಿ ಆಗಮಿಸಿ ಗ್ರಾಮಸ್ಥರಿಗೆ ಸಾಂತ್ವನ ಹೇಳಿದರಲ್ಲದೆ ನಿಮ್ಮ ಬೆಂಬಲಕ್ಕೆ ನಾವಿದ್ದೇವೆಂದು ಭರವಸೆ ನೀಡಿದರು. ದಿನಾಂಕ 23ರಂದು ನಡೆದ ಸರಳ ಸಮಾರಂಭದಲ್ಲಿ ಗ್ರಾಮದ ಸಂತ್ರಸ್ತರಿಗೆ ಆದ್ಯತೆ ಮೇರೆಗೆ ಧನ ಸಹಾಯ ವಿತರಿಸಲಾಯಿತು.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಇಂತಹ ಸಜ್ಜನ ಬಂಧುಗಳ ಸಹಾಯಕ್ಕೆ ಗ್ರಾಮಸ್ಥರು ಧನ್ಯವಾದ ಸಮರ್ಪಿಸಿದರು.

-ನಾಗೇಶ್ ಕಾಲೂರು.