ಮಡಿಕೇರಿ, ಸೆ. 24: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದ್ದಲ್ಲದೆ, ಇನ್ನು ಕೂಡ ಮೂರು ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಆಗಮನವಿಲ್ಲದೆ ಬಾಗಿಲು ಮುಚ್ಚಿಕೊಂಡಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳೊಂದಿಗೆ ಸಂಪಾಜೆ ವ್ಯಾಪ್ತಿಯ ಅರೆಕಲ್ಲು ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿವೆ.ಕಳೆದ ಮೂರು ತಿಂಗಳು ಸುರಿದ ವಿಪರೀತ ಮಳೆಯ ನಡುವೆ ಜಲಸ್ಫೋಟದೊಂದಿಗೆ ಭೂಕುಸಿತ ಸಂಭವಿಸಿ, ಅಲ್ಲಲ್ಲಿ ರಸ್ತೆಗಳು ಸಂಪರ್ಕ ಕಡಿತಗೊಂಡಿದ್ದ ಪರಿಣಾಮ ಸಾರಿಗೆ ಸೌಲಭ್ಯವಿಲ್ಲದೆ ಕಾಲೂರು ಸರಕಾರಿ ಶಾಲೆಯ ಮಕ್ಕಳನ್ನು ಬೇರೆಡೆಗೆ ಪೋಷಕರು ಕರೆದೊಯ್ದಿದ್ದರಿಂದ ಈ ಶಾಲೆ ಮುಚ್ಚಿ ಹೋಗಿದೆ.ಅಂತೆಯೇ ಇದೇ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮದ ಅಲ್ಲಲ್ಲಿ ಭೂಕುಸಿದು, ರಸ್ತೆ ಸಂಪರ್ಕವಿಲ್ಲದೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆ ಇಡೀ ಗ್ರಾಮಸ್ಥರು ಊರು ಬಿಟ್ಟಿರುವ ಕಾರಣ, ಇಂದು ಮೊಣ್ಣಂಗೇರಿ ಶಾಲೆಯೂ ಮಕ್ಕಳಿಲ್ಲದೆ ಸ್ಥಗಿತಗೊಂಡಿದೆ.

ಇನ್ನೊಂದೆಡೆ ಜಿಲ್ಲೆಯ ಗಡಿಯಂಚಿನಲ್ಲಿರುವ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಅರೆಕಲ್ಲು ಕಿರಿಯ ಪ್ರಾಥಮಿಕ ಶಾಲೆ ಕೂಡ ಮಕ್ಕಳಿಲ್ಲದ ಕಾರಣ ಆರಂಭಿಸಲು ಆಗಿಲ್ಲ. ಹೀಗಾಗಿ ಮಡಿಕೇರಿ ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ 18 ಶಾಲೆಗಳು, ಕಳೆದ ತಿಂಗಳು ಶೈಕ್ಷಣಿಕ ಚಟುವಟಿಕೆಯಿಲ್ಲದೆ ಮುಚ್ಚಲ್ಪಟ್ಟಿ ತ್ತಾದರೂ, ಪರ್ಯಾಯ ವ್ಯವಸ್ಥೆ ಯೊಂದಿಗೆ ಆ ಎಲ್ಲ ಮಕ್ಕಳಿಗೆ ಪರಿಹಾರ ಕೇಂದ್ರಗಳಲ್ಲಿ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಲಾಗಿತ್ತು. ಇದೀಗ ಬದಲಾದ ಪರಿಸ್ಥಿತಿಯ ನಡುವೆ 15 ಶಾಲೆಗಳು ಪುನರಾರಂಭಗೊಂಡಿವೆ.

ಹಾಗೆಯೇ ಮುಚ್ಚಿ ಹೋಗಿರುವ ಶಾಲೆಗಳ ಪೈಕಿ ಕಾಲೂರಿನ 7 ಮಕ್ಕಳು, 2ನೇ ಮೊಣ್ಣಂಗೇರಿಯಿಂದ 17 ಹಾಗೂ ಅರೆಕಲ್ಲುವಿನ 3 ವಿದ್ಯಾರ್ಥಿಗಳಿಗೆ ಸಮೀಪದ ಇತರ ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳ 400ಕ್ಕೂ ಅಧಿಕ ಮಕ್ಕಳು ಈಗಾಗಲೇ ಆಯಾ ಶಾಲೆಗಳಲ್ಲಿ ಮರಳಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಇನ್ನು ಕೆಲವಷ್ಟು ಮಕ್ಕಳನ್ನು ಪೋಷಕರು ಬೇರೆಡೆಗಳಲ್ಲಿ ದಾಖಲಿಸಿದ್ದಾರೆ.

ರಸ್ತೆಯಿಲ್ಲದೆ ಸಮಸ್ಯೆ: ಅದೇ ರೀತಿ ಮಡಿಕೇರಿ ಕ್ಷೇತ್ರದ ಕಾಂಡನಕೊಲ್ಲಿ ಸರಕಾರಿ ಶಾಲೆಗೆ ರಸ್ತೆ ಸಂಪರ್ಕವಿಲ್ಲದೆ ಸಾಕಷ್ಟು ಸಮಸ್ಯೆಗಳ ನಡುವೆಯೂ ಅಲ್ಲಿನ ಶಿಕ್ಷಕರು ಸುತ್ತ ಮುತ್ತಲಿನ ಮಕ್ಕಳಿಗೆ ಪಠ್ಯ ಚಟುವಟಿಕೆ ಮುಂದುವರೆಸಿದ್ದು, ಈ ಶಾಲೆಗೆ ಮಕ್ಕಳು ಹಾಜರಾಗತೊಡಗಿದ್ದಾರೆ.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ ಶಾಲೆಗಳ

(ಮೊದಲ ಪುಟದಿಂದ) ದುರಸ್ತಿಗೆ ಜಿಲ್ಲಾಡಳಿತದಿಂದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಬಿಡುಗಡೆಗೊಳಿಸಿದ್ದು, ಅಗತ್ಯ ಇರುವೆಡೆಗಳಲ್ಲಿ ದುರಸ್ತಿ ಕೆಲಸ ಕೈಗೊಳ್ಳಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಖಚಿತಪಡಿಸಿದ್ದಾರೆ. ಈಗಾಗಲೇ ಮುಚ್ಚಿರುವ ಶಾಲಾ ಕಟ್ಟಡಗಳಿಗೆ ಅನುದಾನವಿದ್ದು, ಅಂತಹ ಹಣವನ್ನು ಪುನರ್ ಪರಿಶೀಲಿಸಿ, ಅಗತ್ಯವಿರುವ ಶಾಲಾ ಕಟ್ಟಡಗಳಿಗೆ ವಿನಿಯೋಗಿಸಲು ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ.

ನಿರ್ಮಲ ವಿದ್ಯಾಲಯ: ಇನ್ನು ಸೋಮವಾರಪೇಟೆ ತಾಲೂಕಿನ ಹಟ್ಟಿಹೊಳೆಯ ನಿರ್ಮಲ ಆಂಗ್ಲ ಮಾಧ್ಯಮ ವಿದ್ಯಾಭವನ ಶಾಲೆಯ ಮಕ್ಕಳು ಸುಂಟಿಕೊಪ್ಪದ ಸಂತ ಮರಿ ಹಾಗೂ ಸಂತ ಅಂತೋಣಿ ಶಾಲಾ ಕೊಠಡಿಗಳಿಗೆ ಸ್ಥಳಾಂತರಗೊಂಡಿದ್ದು, ಸುಮಾರು 500 ಮಕ್ಕಳು ಅಲ್ಲಿಯೇ ಸದ್ಯ ಕಲಿಕೆ ಮುಂದುವರಿಸಲಿದ್ದಾರೆ.

ಮುಖ್ಯಸ್ಥರ ಸ್ಪಷ್ಟನೆ: ಶಾಲಾ ಮುಖ್ಯಸ್ಥ ಎಡ್ವಾರ್ಡ್ ಸಾಲ್ಡಾನ ಈ ಬಗ್ಗೆ ಸ್ಪಷ್ಟನೆಯೊಂದಿಗೆ, ಹಟ್ಟಿಹೊಳೆಯ ರಸ್ತೆ ಸಂಪರ್ಕದೊಂದಿಗೆ, ಮರಳಿ ಅಪಾಯ ಎದುರಾಗದಿರುವ ಬಗ್ಗೆ ಜಿಲ್ಲಾಡಳಿತ ದಿಂದ ಖಾತರಿ ಲಭಿಸಿದ ಬಳಿಕವಷ್ಟೇ ಅಲ್ಲಿ ಶಾಲೆ ಪುನರಾರಂಭಿಸುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.

ಸುಂಟಿಕೊಪ್ಪ ಹಾಗೂ ಹಟ್ಟಿಹೊಳೆ ಶಾಲೆಗಳು ಮೈಸೂರಿನ ಎಂ.ಡಿ.ಇ.ಎಸ್. ಸಂಸ್ಥೆಯ ಅಧೀನವಿದ್ದು, ಪ್ರಸಕ್ತ ಹಟ್ಟಿಹೊಳೆ ಶಾಲಾ ಮಕ್ಕಳಿಗೆ ಯಾವದೇ ತೊಂದರೆ ಉಂಟಾಗದಂತೆ ಸುಂಟಿಕೊಪ್ಪ ಶಾಲಾ ಪರಿಸರದಲ್ಲಿ ಸೂಕ್ತ ವ್ಯವಸ್ಥೆ ರೂಪಿಸಿರುವದಾಗಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಆಡಳಿತ ಮಂಡಳಿಯು ಪೋಷಕರು ಮತ್ತು ಶಿಕ್ಷಣ ಇಲಾಖೆಯ ಸಲಹೆ ಮೇರೆಗೆ, ಮರಳಿ ಹಟ್ಟಿಹೊಳೆಗೆ ಸ್ಥಳಾಂತರಿಸುವ ತೀರ್ಮಾನ ತೆಗೆದುಕೊಳ್ಳಲಿದ್ದು, ಈಗಿನ ಪರಿಸ್ಥಿತಿಯಲ್ಲಿ ಸುಂಟಿಕೊಪ್ಪದಲ್ಲೇ ವಿದ್ಯಾಭ್ಯಾಸ ಮುಂದುವರೆಸಲಿ ರುವದಾಗಿ ವಿವರಿಸಿದ್ದಾರೆ.