ಸೋಮವಾರಪೇಟೆ,ಸೆ.24: ಕೊಡಗು ಜಿಲ್ಲೆಯಲ್ಲಿ ಜಾನಪದ ಕಲೆ, ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಜಾನಪದ ಕಲಾವಿದರ ಸಮಗ್ರ ಮಾಹಿತಿ ಕೋಶವನ್ನು ಹೊರತರಲು ಪರಿಷತ್‍ನಿಂದ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಕಲಾವಿದರು, ಅವರನ್ನು ಬಲ್ಲವರು ಮಾಹಿತಿ ನೀಡಲು ಕೋರಿದರು. ಈಗಾಗಲೇ ಪ್ರಯತ್ನ ನಡೆದಿದ್ದರೂ ಪ್ರತಿಕ್ರಿಯೆ ಉತ್ಸಾಹದಾಯಕವಾಗಿಲ್ಲ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ಜಾನಪದ ಪರಿಷತ್‍ನ ವತಿಯಿಂದ ಆಯೋಜಿಸಲಾಗಿದ್ದ ಅಧ್ಯಯನ ಪ್ರವಾಸ ಮತ್ತು ಸದಸ್ಯರ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಹುಣಸೂರಿನ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ಪರಿಷತ್‍ನಿಂದ ಈಗಾಗಲೇ ಜಾನಪದ ಸಂಸ್ಕøತಿ, ಕಲೆಗಳ ಉಳಿವಿಗೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಡಗು ಜಿಲ್ಲೆ ಕಲೆಗಳ ತವರೂರಾಗಿದೆ. ಆದರೂ ಅನೇಕ ಜಾನಪದೀಯ ಕಲೆಗಳು ಇಂದು ಅಳಿವಿನಂಚಿಗೆ ಸಾಗುತ್ತಿದ್ದು, ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡಗಿನಲ್ಲಿರುವ ಎಲ್ಲಾ ಜಾನಪದ ಕಲಾವಿದರು, ಕಲೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡಂತೆ ‘ಮಾಹಿತಿ ಕೋಶ’ ಹೊರತರಲು ಚಿಂತನೆ ನಡೆದಿದೆ ಎಂದರು.

ಪರಿಷತ್‍ನ 46 ಮಂದಿ ಸದಸ್ಯರು ಶಿವನಸಮುದ್ರದ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತ ಸೇರಿದಂತೆ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು. ಮಂಡ್ಯ, ಮಳವಳ್ಳಿಯಲ್ಲಿ ಕಾವೇರಿ ನದಿ ಪಾತ್ರದಲ್ಲಿರುವ ಭತ್ತ, ಕಬ್ಬು ಸೇರಿದಂತೆ ಇನ್ನಿತರ ಕೃಷಿ ಪ್ರದೇಶಗಳನ್ನು ವೀಕ್ಷಿಸಿದರು.

ಹುಣಸೂರಿನ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್, ಹುಣಸೂರು ಘಟಕದ ಅಧ್ಯಕ್ಷ ನರಹರಿ, ಜಾನಪದ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಖಜಾಂಚಿ ಸಂಪತ್, ಮಡಿಕೇರಿ ತಾಲೂಕು ಅಧ್ಯಕ್ಷ ಹೆಚ್.ಟಿ. ಅನಿಲ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಚಂದ್ರಮೋಹನ್, ಹೋಬಳಿ ಅಧ್ಯಕ್ಷ ಎಸ್.ಎ. ಮುರಳೀಧರ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಹೇಶ್ ನಾಚಯ್ಯ, ಮೂರ್ನಾಡು ಹೋಬಳಿ ಅಧ್ಯಕ್ಷ ಪ್ರಶಾಂತ್, ರೋಟರಿ ಸಂಸ್ಥೆಯ ರವೀಂದ್ರ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸತೀಶ್ ಕುಂಚದಲ್ಲಿ ಅರಳಿದ ಭರಚುಕ್ಕಿ ಜಲಪಾತ

ಜಿಲ್ಲೆಯ ಕಲಾವಿದ ಬಿ.ಆರ್. ಸತೀಶ್ ಅವರು ಭರಚುಕ್ಕಿ ಜಲಪಾತ ಬಳಿ ಸ್ಥಳದಲ್ಲಿಯೇ ತಮ್ಮ ಕುಂಚದಿಂದ ಜಲಪಾತವನ್ನು ಬಿಡಿಸುವ ಮೂಲಕ ನೂರಾರು ಕಲಾಸಕ್ತರ ಗಮನ ಸೆಳೆದರು.

ಜಿಲ್ಲಾ ಜಾನಪದ ಪರಿಷತ್‍ನಿಂದ ಆಯೋಜಿಸಿದ್ದ ಅಧ್ಯಯನ ಪ್ರವಾಸ ತಂಡದೊಂದಿಗೆ ತೆರಳಿದ ಸತೀಶ್ ಅವರು, ಜಲಪಾತದ ಮುಂಭಾಗ ಕೇವಲ 10 ನಿಮಿಷದಲ್ಲಿಯೇ ತಮ್ಮ ಕಲಾಕೌಶಲ್ಯದಿಂದ ಭರಚುಕ್ಕಿಯನ್ನು ಬಣ್ಣಗಳಿಂದ ಮೂಡಿಸಿದರು.

ಜಲಪಾತವನ್ನು ವೀಕ್ಷಿಸಲು ಆಗಮಿಸಿದ್ದ ನೂರಾರು ಮಂದಿ ಪ್ರವಾಸಿಗರು, ಸತೀಶ್ ಅವರ ಕಲಾಕೌಶಲ್ಯವನ್ನು ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸತೀಶ್ ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ.