ಸೋಮವಾರಪೇಟೆ, ಸೆ. 24: ದೇಶದಲ್ಲಿ ಅಧಿಕಾರ ಪಡೆದ ಮನುವಾದಿಗಳು ಸಂವಿಧಾನವನ್ನು ಬದಲಾಯಿಸಲು ಹೊರಡಿದ್ದಾರೆ. ಪರಿಶಿಷ್ಟ ಜನಾಂಗದ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ)ದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ಪರಿಶಿಷ್ಟ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೆಹಲಿಯಲ್ಲಿ ಮೀಸಲಾತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮನುವಾದಿಗಳು ಸಂವಿಧಾನದ ಪ್ರತಿಗಳನ್ನು ಬಹಿರಂಗವಾಗಿ ಸುಟ್ಟುಹಾಕಿದರೂ ಪ್ರಧಾನಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ಆರೋಪಿಸಿದರು.

ಪರಿಶಿಷ್ಟ ಜನಾಂಗದ ಮೇಲಿನ ಅಟ್ರಾಸಿಟಿ ತಡೆ ಕಾಯ್ದೆಯನ್ನು ರಕ್ಷಿಸಿ, ಇನ್ನಷ್ಟು ಬಲಪಡಿಸಬೇಕು. ಸುಪ್ರೀಂ ಕೋರ್ಟ್‍ನಂತರ ಉನ್ನತ ನ್ಯಾಯಪೀಠಗಳಲ್ಲಿ ಜನಾಂಗದ ಮೀಸಲಾತಿ ಜಾರಿಯಾಗಬೇಕು. ಪರಿಶಿಷ್ಟ ಹಿಂದುಳಿದ, ಅಲ್ಪಸಂಖ್ಯಾತ ಹೋರಾಟಗಾರರ ಮೇಲೆ ಹಾಕಲಾಗಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಬಡ್ತಿ ಮೀಸಲಾತಿಗಳನ್ನು ಜಾರಿಗೊಳಿಸಬೇಕು. ಸಂವಿಧಾನದ ಪ್ರತಿಗಳನ್ನು ಸುಟ್ಟ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬಿತ್ಯಾದಿ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ್ ಮಹೇಶ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಭೀಮವಾದದ ಜಿಲ್ಲಾಧ್ಯಕ್ಷ ಕೆ.ಬಿ. ರಾಜು, ಆರ್‍ಪಿಐ ಪಕ್ಷದ ಮುಖಂಡ ಕೆ.ಸಿ. ಪೂವಯ್ಯ, ಸಂಯೋಜಕದ ತಾಲೂಕು ಅಧ್ಯಕ್ಷ ಎನ್.ಆರ್. ದೇವರಾಜ್, ವಿವಿಧ ಪರಿಶಿಷ್ಟ ಜನಾಂಗ ಪರ ಸಂಘಟನೆಗಳ ಎಂ.ಎನ್. ರಾಜಪ್ಪ, ಎಸ್.ಜೆ. ರಾಜಪ್ಪ, ಕಾಂತರಾಜು, ಉಮೇಶ್‍ಕುಮಾರ್, ಮೆಣಸ ರಾಜಪ್ಪ, ಪಿ.ಬಿ. ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.