ಮಡಿಕೇರಿ, ಸೆ. 23: ವೀರಾಜಪೇಟೆ ನಗರದ 21 ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಸಹಿತ ಸಿದ್ದಾಪುರ ವ್ಯಾಪ್ತಿಯ 8 ಹಾಗೂ ಶನಿವಾರಸಂತೆ ವ್ಯಾಪ್ತಿಯ 15 ಉತ್ಸವ ಮೂರ್ತಿಗಳೊಂದಿಗೆ ಈ ರಾತ್ರಿ 40ಕ್ಕೂ ಅಧಿಕ ಗಣೇಶೋತ್ಸವ ಮೂರ್ತಿಗಳ ವಿಸರ್ಜನ ಕಾರ್ಯಕ್ಕೆ ಚಾಲನೆ ದೊರೆಯಿತು.ವಿಶೇಷವಾಗಿ ವೀರಾಜಪೇಟೆ ಹಾಗೂ ಇತರೆಡೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಪೊಲೀಸ್ ಇಲಾಖೆಯಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ‘ಶಕ್ತಿ’ ಯೊಂದಿಗೆ ಖಚಿತಪಡಿಸಿದ್ದಾರೆ. ತಮ್ಮ ಮಾರ್ಗದರ್ಶನದಲ್ಲಿ ಆಯಾ ವಿಭಾಗದ ಡಿವೈಎಸ್‍ಪಿಗಳು ಭದ್ರತಾ ಕ್ರಮ ಕೈಗೊಂಡಿರುವದಾಗಿ ಮಾಹಿತಿ ನೀಡಿದರು. ಐವರು ವೃತ್ತ ನಿರೀಕ್ಷಕರು, 8 ಮಂದಿ ಉಪನಿರೀಕ್ಷಕರು, 20 ಸಹಾಯಕ ಉಪನಿರೀಕ್ಷಕರ ಸಹಿತ 150 ಅಧಿಕ ಸಿಬ್ಬಂದಿಯೊಂದಿಗೆ ಕೆಎಸ್‍ಆರ್‍ಪಿ ಹಾಗೂ ಡಿಎಆರ್ ತುಕಡಿಗಳನ್ನು ವೀರಾಜಪೇಟೆಯಲ್ಲಿ ನಿಯೋಜಿಸಿರುವದಾಗಿ ಸ್ಪಷ್ಟಪಡಿಸಿದರು. ಇತರೆಡೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಭದ್ರತಾ ಕ್ರಮ ಕೈಗೊಂಡಿರುವದಾಗಿ ವಿವರಿಸಿದರು.