ಅಪಘಾತ : ದರ್ಶನ್ ಸೇರಿ ಮೂವರಿಗೆ ಗಾಯ

ಮೈಸೂರು, ಸೆ.24 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಸುಕಿನ ಜಾವ ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು ಅವರ ಕೈ ಮುರಿದಿದೆ ಎಂದು ವರದಿಗಳು ತಿಳಿಸಿವೆ. ಅವರ ಜೊತೆ ಕನ್ನಡದ ಹಿರಿಯ ನಟರಾದ ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ಮತ್ತೊಬ್ಬರು ಸಹ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ ಸುಮಾರು ಮೂರು ಗಂಟೆಯ ಸಮಯದಲ್ಲಿ ಅಪಘಾತ ನಡೆದಿದ್ದು, ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಮೂವರಿಗೂ ಗಾಯವಾಗಿದ್ದು, ಮೈಸೂರು-ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸುದ್ದಿ ಕೇಳುತ್ತಿದ್ದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ, ಬಂಧುಗಳು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಜೆಎಸ್‍ಎಸ್ ಅರ್ಬನ್ ಹಟ್ ಜಂಕ್ಷನ್ ಹತ್ತಿರ ಡಿವೈಡರ್‍ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ದರ್ಶನ್ ಅವರು ಒಡೆಯ ಚಿತ್ರದ ಶೂಟಿಂಗ್ ಮುಗಿಸಿ ವಾಪಸ್ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ನಟ ವಿಜಯ್‍ಗೆ 2 ದಿನ ಜೈಲೇ ಗತಿ

ಮಡಿಕೇರಿ, ಸೆ.24 : ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನಟ ವಿಜಯ್ ಜಾಮೀನು ಅರ್ಜಿ ಆದೇಶವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಸೆ.26 ವರೆಗೆ ಕಾಯ್ದಿರಿಸಿದೆ. ಜಾಮೀನು ಅರ್ಜಿ ಆದೇಶ ಕಾಯ್ದಿರಿಸಲಾಗಿರುವ ಹಿನ್ನೆಲೆಯಲ್ಲಿ ನಟ ವಿಜಯ್ ಇನ್ನೂ 2 ದಿನಗಳ ಕಾಲ ಜೈಲಿನಲ್ಲೇ ಇರಬೇಕಾಗಿದೆ. ಮ್ಕ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ನಟ ದುನಿಯಾ ವಿಜಯ್ ಪರ ವಾದ ಮಂಡಿಸಿರುವ ವಕೀಲರು, ತಮ್ಮ ಕಕ್ಷಿದಾರರ ವಿರುದ್ಧ ಪೆÇಲೀಸರು ಸೆಕ್ಷನ್ 326 ಅಡಿಯಲ್ಲಿ ಪ್ರಕರಣ ದಾಖಲಿಸಿರುವದಕ್ಕೆ ಆಕ್ಷೇಪಿಸಿದ್ದಾರೆ. ನಡೆದಿರುವ ಘಟನೆಯಲ್ಲಿ ಮಾರಕಾಸ್ತ್ರಗಳು ಬಳಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ವಿಜಯ್ ಪರ ವಾದ ಮಂಡಿಸಿರುವ ವಕೀಲರು ಹೇಳಿದ್ದಾರೆ. ವಿಜಯ್ ಗೆ ಜಾಮೀನು ನೀಡುವದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಇದು ಗಂಭೀರ ಪ್ರಕರಣವಗಿದ್ದು ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದಾರೆ. ನ್ಯಾಯಾಲಯ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.

ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ, ಸೆ.24 : ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಸೋಮವಾರ ಹೊಡೆದುರುಳಿಸಿದೆ. ಕುಪ್ವಾರ ಜಿಲ್ಲೆಯ ತಂಗ್ಧಾರ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದ ಹಿನ್ನಲೆಯಲ್ಲಿ ಸೇನೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ. ಉಗ್ರರ ವಿರುದ್ಧ ನಡೆಸಲಾದ ಕಾರ್ಯಾಚರಣೆ ವೇಳೆ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ. ನಿನ್ನೆ ಕೂಡ ಇದೇ ಪ್ರದೇಶದಲ್ಲಿ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು. ಇದೀಗ ಮತ್ತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಒಟ್ಟು ಐವರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ.