ವೀರಾಜಪೇಟೆ, ಸೆ. 24: ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನ್ವರುಲಾ ಹುದಾ ಸೆಂಟರ್‍ಗೆ ವಿದ್ಯುತ್ ಪಡೆದುಕೊಳ್ಳಲು ಪಂಚಾಯಿತಿಯಿಂದ ನೀಡಿರುವ ನಿರಾಕ್ಷೇಪಣಾ ಪತ್ರ ಕಾನೂನು ಬಾಹಿರವಾಗಿದ್ದು ಕೂಡಲೆ ವಿದ್ಯುತ್ ಸಂಪರ್ಕವನ್ನು ಹಿಂಪಡೆಯಬೇಕು. ಕಾನೂನು ಬಾಹಿರ ಕೃತ್ಯಕ್ಕೆ ಸಹಕರಿಸಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಆರ್ಜಿ ಗ್ರಾಮಸ್ಥರ ಪರವಾಗಿ ಗ್ರಾಮದ ಹಿರಿಯ ಹಾಗೂ ಆರ್ಜಿಯ ಗೋಮಾಳ ಸಮಿತಿ ಅಧ್ಯಕ್ಷ ಕೀತಿಯಂಡ ಸುಬ್ಬಯ್ಯ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸರ್ವೆ ಸಂಖ್ಯೆ 64/10ರಲ್ಲಿ 2.54 ಎಕರೆ ಕೃಷಿ ಭೂಮಿಯಲ್ಲಿ ಅನ್ವರುಲಾ ದುದಾ ಸೆಂಟರ್ ಅವರು ಅನಾಥಾಶ್ರಮಕ್ಕೆಂದು ಜಾಗ ಪಡೆದುಕೊಂಡು ಶಾಲೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಆರ್ಜಿ ಪಂಚಾಯಿತಿ ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸಿದ ಕಾರಣ ಸಂಸ್ಥೆಯವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವ ರೀತಿಯಲ್ಲಿ ಪಿಲ್ಲರ್ ಹಾಗೂ ಚರಂಡಿಗಳನ್ನು ನಿರ್ಮಿಸಿ ಕಟ್ಟಡವನ್ನು ಕಟ್ಟುವಂತೆ ಆದೇಶಿಸಿದ್ದಾರೆ. ಆದರೆ ಸಂಸ್ಥೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನೆಲದಿಂದಲೇ ಕಟ್ಟಡ ನಿರ್ಮಿಸಿದರೂ ಕೂಡ ಪಂಚಾಯಿತಿ ಪಿಡಿಒ ವಿದ್ಯುತ್ ಪಡೆದುಕೊಳ್ಳಲು ನಿರಾಕ್ಷೇಪಣಾ ಪತ್ರ ನೀಡಿದ್ದಾರೆ.

ತಾ. 1 ರಂದು ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರೀಶೀಲನೆ ನಡೆಸಿದಾಗ ಸದರಿ ಕಟ್ಟಡವು ನ್ಯಾಯಾಲಯದ ಆದೇಶದಂತೆ ನಿರ್ಮಿಸಿರುವದು ಕಂಡು ಬಂದಿರುವದಿಲ್ಲ. ಸೂಕ್ಷ್ಮತೆಯನ್ನು ಅರಿಯದೆ ತರಾತುರಿಯಲ್ಲಿ ನಿಮಯ ಬಾಹಿರವಾಗಿ ಪ್ರಕ್ರಿಯೆಯನ್ನು ಕೈಗೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಬರೆದ ಪತ್ರದ ಪ್ರತಿಯನ್ನು ತೋರಿಸಿದರು. ಮುಂದಿನ 10 ದಿನಗಳಲ್ಲಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಿ.ಜಿ. ಪುರುಷೋತ್ತಮ, ಕರ್ತಚ್ಚಿರ ರಾಯ್ ಅಯ್ಯಪ್ಪ, ಚಂದಪಂಡ ಆಕಾಶ್ ಚಂಗಪ್ಪ, ಕಿರಣ್ ಮಾಚಯ್ಯ, ಕೀತಿಯಂಡ ಪ್ರತಾಪ್ ಕುಟ್ಟಯ್ಯ, ಮಂಜು ಅಯ್ಯಪ್ಪ, ಅರುಣ್ ಅಯ್ಯಣ್ಣ ಉಪಸ್ಥಿತರಿದ್ದರು.