ಮಡಿಕೇರಿ, ಸೆ. 23: ಪ್ರಾಕೃತಿಕ ವಿಕೋಪದಿಂದ ಮನೆ ಮಠಗಳನ್ನು ಕಳೆದುಕೊಂಡಿರುವ ಗ್ರಾಮೀಣ ಜನತೆ ಇನ್ನು ಕೂಡ ನೈಜ ಬದುಕಿಗೆ ಬರಲು ಸಾಧ್ಯವಾಗದ ಸ್ಥಿತಿಯಲ್ಲಿ ಪರಿತಪಿಸುತ್ತಿದ್ದಾರೆ. ಇಂತಹ ನೊಂದ ಕುಟುಂಬಗಳಿಗೆ ಇಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಖುದ್ದು ತೆರಳಿ ಸಂತೈಸುವ ಮೂಲಕ, ಸರಕಾರದಿಂದ ಸೂಕ್ತ ನೆರವಿನ ಭರವಸೆ ನೀಡಿದರು. ಈ ಸಂದರ್ಭ ಆಗಸ್ಟ್ ಮಧ್ಯಭಾಗದಲ್ಲಿ ಸಂಭವಿಸಿದ ಭೀಕರ ಘಟನೆಗಳನ್ನು ಅಲ್ಲಿನ ನಿವಾಸಿಗಳು ಶಾಸಕೀಯ ಮುಂದೆ ಮೆಲುಕು ಹಾಕುತ್ತಾ ಕಣ್ಣೀರುಗರೆದ ದೃಶ್ಯ ಎದುರಾಯಿತು.ಹೆಬ್ಬೆಟ್ಟಗೇರಿ ಗ್ರಾಮದಲ್ಲಿ (ಮೊದಲ ಪುಟದಿಂದ) ಕಳೆದ ಅಕ್ಟೋಬರ್ 17 ರಂದು ಮಿನ್ನಂಡ ಉಮ್ಮವ್ವ ತನ್ನ ಕಣ್ಣೆದುರೇ ಜೀವಂತ ಸಮಾಧಿಯಾದ ಸ್ಥಿತಿಯನ್ನು ಮೃತರ ಮೊಮ್ಮಗಳು ಸಂಗೀತಾ ಗಣಪತಿ ವಿವರಿಸುತ್ತಾ, ತಾ. 17 ರಂದು ಬೆಳಿಗ್ಗೆ 7.30ರ ಸುಮಾರಿಗೆ ಒಂದು ರೀತಿ ಭಯಂಕರ ಶಬ್ದ ಕೇಳಿದ ಅನುಭವವಾಯಿತೆಂದು ನೆನಪಿಸಿದರು. ಈ ವೇಳೆ ಕೇವಲ 6 ತಿಂಗಳ ಹಿಂದೆ ಗೃಹಪ್ರವೇಶವಾಗಿದ್ದ ಮನೆಯಿಂದ ಅನತಿ ದೂರವಿದ್ದ ಹಳೆಯ ಮನೆ ಕುಸಿದುದನ್ನು ವಿವರಿಸಿದರು.ಆ ವೇಳೆಗೆ ಮನೆ ಬಳಿಯ ಕಾಡು ಸಹಿತ ಜಲಸ್ಫೋಟಗೊಂಡು ಬುಡ ಸಹಿತ ಮೇಲಕ್ಕೆ ಎಸೆಯಲ್ಪಟ್ಟ ಮರವೊಂದು ಬುಗುರಿಯಂತೆ ತಿರುಗಲಾರಂಭಿಸಿದಾಗ, ಆ ನೀರಿನ ಪ್ರವಾಹವು ಉರಿಯುತ್ತಿರುವ ಬೆಂಕಿಯಂತೆ ಬಾಸವಾಯಿತು. ಆ ವೇಳೆಗೆ ಗುಡ್ಡ ಕುಸಿತದ ಮಣ್ಣು ಅಜ್ಜಿಯನ್ನು ಸೆಳೆದುಕೊಂಡಾಗ, ಉಳಿದವರು ಪ್ರಾಣ ರಕ್ಷಣೆಗಾಗಿ ಚದುರಿ ಹೋಗಿ ಬೇರೆ ಬೇರೆ ಕಡೆಗಳಲ್ಲಿ ತಪ್ಪಿಸಿಕೊಂಡು ಚೆಟ್ಟಿರ ಕುಟುಂಬದ ಸಂಬಂಧಿಕರ ಮನೆ ಬಳಿ ಒಗ್ಗೂಡಿ, ಮತ್ತೆ ಮಡಿಕೇರಿಯ ಪರಿಹಾರ ಕೇಂದ್ರದತ್ತ ಬೇರೆಯವರ ನೆರವಿನಲ್ಲಿ ಬಂದಿದ್ದಾಗಿ ನೆನಪಿಸಿಕೊಂಡು ಘಟನೆಯ ಭೀಕರತೆಯನ್ನು ವಿವರಿಸಿದರು.

ಇಂದಿಗೂ ನೆಲಕಚ್ಚಿರುವ ಮನೆಯ ಮಣ್ಣಿನಡಿ ಬೆಲೆಬಾಳುವ ವಸ್ತುಗಳು ಹುದುಗಿರುವದಾಗಿ ಅಸಹಾಯಕತೆ ತೋಡಿಕೊಂಡ ಈ ಕುಟುಂಬಕ್ಕೆ ಜೆಸಿಬಿ ಯಂತ್ರ ಕಲ್ಪಿಸಿಕೊಟ್ಟು ಬೆಲೆಬಾಳುವ ವಸ್ತುಗಳನ್ನು ಹುಡುಕುವಲ್ಲಿ ಕೈ ಜೋಡಿಸುವದಾಗಿ ವೀಣಾ ಅಚ್ಚಯ್ಯ ಭರವಸೆ ನೀಡಿದರು.

ದೇವಸ್ತೂರು ಭಯಾನಕ : ದೇವಸ್ತೂರು ನಿವಾಸಿ, ಪಾಣತ್ತಲೆ ಜನಾರ್ಧನ ಎಂಬವರ ಮನೆಗೆ ಅಪ್ಪಳಿಸಿರುವ ಗಜಗಾತ್ರದ ಮರವೊಂದರ ಬುಡವು, ಹೊಡೆತದ ರಭಸಕ್ಕೆ ಗೋಡೆ ಸಹಿತ ಮೇಲ್ಚಾವಣಿಯನ್ನು ಸೀಳಿಗೊಂಡು ಮನೆಯೊಳಗೆ ಇಂದಿಗೂ ಮಣ್ಣು ರಾಶಿ ಸಹಿತ ನಿಂತಿರುವ ಭಯಾನಕ ದೃಶ್ಯ ಎದುರಾಯಿತು. ಈ ಕುಟುಂಬ ತಮ್ಮಿಂದ ಆ ಭಾಗದಲ್ಲಿ ನೆಲಸಮ ಆತಂಕದೊಂದಿಗೆ ಬದಲಿ ನಿವೇಶನದಲ್ಲಿ ಮನೆ ಕಲ್ಪಿಸಿಕೊಡಲು ಶಾಸಕರ ಬಳಿ ಬೇಡಿಕೆ ಸಲ್ಲಿಸಿತು.

ಅಂತೆಯೇ ಗಾಳಿಬೀಡು ಗ್ರಾ.ಪಂ. ಸದಸ್ಯ ಕುಕ್ಕೇರ ಪ್ರದೀಪ್ ನೂತನವಾಗಿ ನಿರ್ಮಿಸಿರುವ ತನ್ನ ಕನಸಿನ ಮನೆಯು ಸಂಪೂರ್ಣ ನೆಲಸಮಗೊಂಡು, ಹೆಂಚುಗಳು ರಟ್ಟಿ ಹೋಗಿ ಕೇವಲ ಮಾಡು ಮಾತ್ರ ಗೋಚರಿಸಿತು. ಅನತಿ ದೂರದಲ್ಲಿ ಅದೇ ಕುಟುಂಬದ ವಸಂತ್ ಎಂಬವರ ನಿರ್ಮಾಣ ಹಂತದಲ್ಲಿರುವ ಕಾಂಕ್ರೀಟ್ ಕಟ್ಟಡ ಮೇಲ್ಚಾವಣಿ ಸಹಿತ ಜಲ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ದೃಶ್ಯ ಎದುರಾಯಿತು. ಹೀಗೆ ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಮುಂತಾದೆಡೆಗಳಲ್ಲಿ ಇಂದು ಸಂಚರಿಸಿದ ವೀಣಾ ಅಚ್ಚಯ್ಯ ನೊಂದ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವದರೊಂದಿಗೆ, ತಮ್ಮ ಊರು ಮುಕ್ಕೋಡ್ಲುವಿನ ಪರಿಸ್ಥಿತಿಯೇ ಇತರೆಡೆಗಳಲ್ಲಿಯೂ ಉಂಟಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಮಣ್ಣು ತೆಗೆಸಲು ಬೇಡಿಕೆ : ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಹಾನಿಯ ಹೊಡೆತದಿಂದ ಹೊರ ಬಾರದ ಹಳ್ಳಿಯ ಜನತೆಯ ಬದುಕು ಸುಧಾರಿಸುವ ದಿಸೆಯಲ್ಲಿ ಸರಕಾರವು ಜಿಲ್ಲಾಡಳಿತಕ್ಕೆ ವಿಶೇಷ ಅನುದಾನ ಒದಗಿಸಿಕೊಟ್ಟು, ಗದ್ದೆಗಳನ್ನು ಅತಿಕ್ರಮಿಸಿಕೊಂಡಿರುವ ಮಣ್ಣನ್ನು ಸರಕಾರದ ಖರ್ಚಿನಲ್ಲಿ ತೆಗೆಸಬೇಕೆಂದು ಬೇಡಿಕೆ ಮುಂದಿಟ್ಟರು.

ಆ ಮುಖಾಂತರ ಭವಿಷ್ಯದಲ್ಲಿ ಗ್ರಾಮೀಣ ಜನತೆಯು ತಮ್ಮ ತಮ್ಮ ಆಸ್ತಿಪಾಸ್ತಿಯಲ್ಲಿ ಅಳಿದುಳಿದಿರುವ ಭೂಮಿಯನ್ನು ಸರಿಪಡಿಸಿಕೊಂಡು ಬದುಕು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಸಹಾಯ ಹಸ್ತ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಈ ವೇಳೆ ಅವರೊಂದಿಗೆ ಪಕ್ಷದ ಪ್ರಮುಖರಾದ ಪುಲಿಯಂಡ ಜಗದೀಶ್, ತೆನ್ನೀರ ಮೈನ ಸೇರಿದಂತೆ ವಿವಿಧ ಗ್ರಾಮಗಳ ಪ್ರಮುಖರು ಹಾಜರಿದ್ದರು.