ಯೋಧನ ಪತ್ನಿಗೆ ಲೆಫ್ಟಿನೆಂಟ್ ಹುದ್ದೆ

ಸಾಂಬಾ, ಸೆ. 23: ದೇಶಕ್ಕಾಗಿ ಪ್ರಾಣತೆತ್ತ ಯೋಧನ ಪತ್ನಿಯೊಬ್ಬರು ಇದೀಗ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ಹುತಾತ್ಮತ ಯೋಧ ರವೀಂದರ್ ಸಂಬ್ಯಾಲ್ ಅವರ ಪತ್ನಿ ನಿರೂ ಸಂಬ್ಯಾಲ್ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ರವೀಂದರ್ ಸಂಬ್ಯಾಲ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 2015ರಲ್ಲಿ ಹುತಾತ್ಮರಾಗಿದ್ದರು. ನಿರೂ ಸಂಬ್ಯಾಲ್ 2013ರಲ್ಲಿ ರವೀಂದರ್ ಅವರನ್ನು ವಿವಾಹವಾಗಿದ್ದರು. ಪತಿ ಹುತಾತ್ಮರಾದ ವಿಚಾರ ತಿಳಿದಾಗ ನಿರೂ ಅವರಿಗೆ 2 ವರ್ಷದ ಪುಟ್ಟ ಮಗುವಿತ್ತು. ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಿರೂ ಅವರು ಯಾವದಕ್ಕೂ ಕುಗ್ಗದೆ, ತಾಯಿಯಾಗಿ ಜವಾಬ್ದಾರಿ ತೆಗೆದುಕೊಂಡು ಮುಂದುವರೆಯಲು ನಿರ್ಧರಿಸಿ ತಮ್ಮ ಹೋರಾಟ ಕುರಿತಂತೆ ಪ್ರತಿಕ್ರಿಯೆ ನೀಡುವ ನಿರೂ ಮಗಳಿಗೆ ತಾಯಿ-ತಂದೆ ಎರಡೂ ಆದೆ. ನನ್ನ ಮಗಳೇ ನನಗೆ ಪ್ರೇರಣೆ. 49 ವಾರಗಳ ಕಾಲ ತರಬೇತಿ ಪಡೆದುಕೊಂಡೆ. 2018ರ ಸೆಪ್ಟೆಂಬರ್‍ನಲ್ಲಿ ತರಬೇತಿ ಆರಂಭಿಸಿದ್ದೆ. ಈ ವೇಳೆ ಮಾನಸಿಕವಾಗಿ ಧೈರ್ಯ ತೆಗೆದುಕೊಂಡೆ. ಸಾಕಷ್ಟು ಸಂಕಷ್ಟಗಳ ಬಳಿಕ ಕೊನೆಗೂ ಸೇನೆಗೆ ಸೇರ್ಪಡೆಗೊಂಡಿದ್ದೇನೆಂದು ಹೇಳಿದ್ದಾರೆ.

ಎನ್‍ಕೌಂಟರ್ ಆರಂಭ

ಪುಲ್ವಾಮ, ಸೆ. 23: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದು, ಉಗ್ರರ ವಿರುದ್ಧ ಭಾರತೀಯ ಸೇನೆ ಎನ್‍ಕೌಂಟರ್ ನಡೆಸಲು ಆರಂಭಿಸಿದೆ ಎಂದು ತಿಳಿದುಬಂದಿದೆ. ತ್ರಾಲ್ ಪ್ರದೇಶದಲ್ಲಿರುವ ಮಿರ್ ಮೊಹಲ್ಲಾ ಅರಿಪಾಲ್ ಎಂಬಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಹಿನ್ನೆಲೆ ಸೇನಾಪಡೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ಧಾಳಿ ನಡೆಸಿದ್ದು, ಕೂಡಲೇ ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಎನ್‍ಕೌಂಟರ್ ನಡೆಸಲು ಆರಂಭಿಸಿವೆ. ಸ್ಥಳದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿವೆ.

ವಿಜಯ್ ವಿರುದ್ಧ ಪ್ರಕರಣ

ಬೆಂಗಳೂರು, ಸೆ. 23: ನಟ ದುನಿಯಾ ವಿಜಯ್ ಮಾರುತಿ ಗೌಡ ಎಂಬಾತನನ್ನು ಅಪಹರಿಸಿ ತನ್ನ ಜೊತೆಗಾರರೊಂದಿಗೆ ಸೇರಿ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ಮಾರುತಿ ಗೌಡ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದುನಿಯಾ ವಿಜಯ್ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆತಂಕದಿಂದ ಮನೆ ಬಿಟ್ಟ ಜನ

ಜಾರ್ಖಂಡ್, ಸೆ. 23: ಒಂದೆಡೆ ಹತ್ಯೆ, ಮತ್ತೊಂದೆಡೆ ಬೆದರಿಕೆ, ಮಾವೋವಾದಿಗಳಿಂದ ಉಂಟಾಗುತ್ತಿರುವ ಆತಂಕÀದಿಂದ ಜಾರ್ಖಂಡ್‍ನಲ್ಲಿರುವ ಗ್ರಾಮವೊಂದರಲ್ಲಿ ಇಡೀ ಗ್ರಾಮಸ್ಥರು ಭಯಗೊಂಡು ಮನೆಗಳನ್ನು ತೊರೆದಿದ್ದಾರೆ. ಮನೆಗಳನ್ನು ತೊರೆಯುವಂತೆ ನಕ್ಸಲರು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದು, ಬೆದರಿಕೆಯಿಂದ ಆತಂಕಕ್ಕೊಳಗಾಗಿರುವ ಗುರಬಂದ ಗ್ರಾಮಸ್ಥರು ತಮ್ಮ ಮನೆಗೆ ತಾವೇ ಹೊಗಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರು ಮನೆಗಳನ್ನು ತೊರೆದಿರುವದರಿಂದ ಮನೆಗಳನ್ನು ನಾಶ ಮಾಡಲಾಗುತ್ತಿದ್ದು, ನಕ್ಸಲರು ಗ್ರಾಮಸ್ಥರಿಗೆ ಸೇರಿದ್ದ ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಈಗ ಜೀವಿಸುವದಕ್ಕೆ ಜಾಗವೇ ಇಲ್ಲದಂತಾಗಿ ಸ್ವಂತ ಕೃಷಿ ಭೂಮಿ ಇದ್ದರೂ ತಾವು ಬೇರೆಯವರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಇಬ್ಬರು ಟಿಡಿಪಿ ನಾಯಕರ ಹತ್ಯೆ

ವಿಶಾಖಪಟ್ಟಣ, ಸೆ. 23: ಟಿಡಿಪಿ ಶಾಸಕ ಸರ್ವೇಶ್ವರ್ ರಾವ್ ಅವರೂ ಸೇರಿದಂತೆ ಒಟ್ಟು ಇಬ್ಬರು ಟಿಡಿಪಿ ನಾಯಕರನ್ನು ಮಹಿಳಾ ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿ ಘಟನೆ ನಡೆದಿದ್ದು, ಶಾಸಕರೊಂದಿಗಿದ್ದ ಮತ್ತೋರ್ವ ಟಿಡಿಪಿ ನಾಯಕನೂ ಮಾವೋವಾದಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಸರ್ವೇಶ್ವರ್ ರಾವ್ ಹಾಗೂ ಮತ್ತೋರ್ವ ಟಿಡಿಪಿ ನಾಯಕ, ಮಾಜಿ ಶಾಸಕ ಸಿವೆರಿ ಸೋಮಾ ಅವರನ್ನೂ ಹತ್ಯೆ ಮಾಡಲಾಗಿದೆ. ಇಬ್ಬರೂ ನಾಯಕರು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹಿಳಾ ಮಾವೋವಾದಿಗಳು ಗುಂಡು ಹಾರಿಸಿದ್ದು, ಆಂಧ್ರ-ಒಡಿಶಾ ಗಡಿ ಭಾಗದಲ್ಲಿದ್ದ ತಂಡ ಇದಾಗಿದೆ ಎಂದು ಹೇಳಲಾಗುತ್ತಿದೆ.

‘ಆಯುಷ್ಮಾನ್’ಗೆ ಪ್ರಧಾನಿ ಚಾಲನೆ

ರಾಂಚಿ, ಸೆ. 23: ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಯೋಜನೆಯನ್ನು ಉದ್ಘಾಟಿಸಿದರು. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಸರ್ಕಾರಿ ಆರೋಗ್ಯ ಕಾರ್ಯಕ್ರಮವಾಗಿದೆ. ಈ ಯೋಜನೆ ದೇಶದ 50 ಕೋಟಿಗೂ ಅಧಿಕ ಫಲಾನುಭವಿಗಳನ್ನು ಒಳಗೊಳ್ಳುವದು ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷದವರೆಗೆ ಸಹಾಯ ನೀಡಲಿದ್ದು, ದ್ವಿತೀಯ ಮತ್ತು ತೃತೀಯ ದರ್ಜೆಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ನೀಡಲಾಗುತ್ತದೆ. 10.74 ಲಕ್ಷ ಕುಟುಂಬಗಳು ಇದರ ಸೌಲಭ್ಯವನ್ನು ಪಡೆಯಲಿದೆ. ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೇರಿಕಾ, ಕೆನಡಾ ಮತ್ತು ಮೆಕ್ಸಿಕೊ ಜನಸಂಖ್ಯೆಗಳಿಗಿಂತ ಭಾರತದಲ್ಲಿ ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.

ತೈಲ ಬೆಲೆ ಮತ್ತೆ ಏರಿಕೆ

ನವದೆಹಲಿ, ಸೆ. 23: ತೈಲ ಬೆಲೆ ಮತ್ತೆ ಏರಿಕೆಯಾಗಿದ್ದು, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90 ರೂಪಾಯಿಯ ಸನಿಹಕ್ಕೆ ಬಂದಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 89.97 ರೂಪಾಯಿಯಷ್ಟಾಗಿದ್ದು, ಡೀಸೆಲ್ 78.53 ರೂಪಾಯಿಯಷ್ಟಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟೋಲ್ ದರ 82.61 ರೂಪಾಯಿಯಷ್ಟಾಗಿದ್ದರೆ ಡೀಸೆಲ್ ದರ 73.97 ರೂಪಾಯಿಯಷ್ಟಾಗಿದೆ. ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 78.80 ಡಾಲರ್ ಆಗಿದ್ದು, ಅಧಿಕವಾದ ಅಬಕಾರಿ ಸುಂಕದಿಂದ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನ

ಮುಂಬೈ, ಸೆ. 23: ಖ್ಯಾತ ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಕಲ್ಪನಾ ಲಜ್ಮಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.