ಕುಶಾಲನಗರ, ಸೆ. 23: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ನೂತನವಾಗಿ ಸ್ಥಾಪಿಸಿರುವ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಹಾಗೂ ರೈತ ಸಹಕಾರ ಭವನದ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ವಸತಿ ಗೃಹಗಳನ್ನು ಉದ್ಘಾಟಿಸಿದರು. ಸಹಕಾರ ಸಂಘವು ವಿವಿಧ ಸಾಮಾಜಿಕ ಹಾಗೂ ಸಮಾಜಕ್ಕೆ ಅನುಕೂಲವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಸಹಕಾರ ಸಂಘಗಳು ಉತ್ತಮ ಮಟ್ಟದಲ್ಲಿ ಸಾಗುತ್ತಿವೆ. ದೇಶ ಎದುರಿಸುತ್ತಿರುವ ಸವಾಲು ಗಳಲ್ಲಿ ವಿದ್ಯುತ್‍ಶಕ್ತಿ ಉತ್ಪಾದನೆಯೂ ಒಂದು ಸವಾಲು. ಉತ್ಪನ್ನಗಳಾದ ಪೆಟ್ರೋಲ್, ಡಿಸೇಲ್, ಗ್ಯಾಸ್ ದರವು ಏರಿಕೆಯಾಗುತ್ತಿರುವ ಹಿನ್ನೆಲೆ ನೈಸರ್ಗಿಕ ಶಕ್ತಿಯನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಹಕಾರ ಸಂಘದ ಬೆಳವಣಿಗೆಯೂ ಸಾಧ್ಯವಾಗುತ್ತದೆ. ಈ ಸೋಲಾರ್ ಘಟಕದಲ್ಲಿ ವಿದ್ಯುತ್ ಉತ್ಪಾದಿಸಿ ಇತರರಿಗೂ ಮಾದರಿಯಾಗುವಂತಹ ಕಾರ್ಯ ನಡೆಸಲಾಗುತ್ತಿದೆ ಎಂದರು.

ಕುಶಾಲನಗರ ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಪಿ. ಅಶೋಕ್ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸೋಲಾರ್ ಪ್ಯಾನಲ್ ಅಳವಡಿಸಿ ಹಣ ಗಳಿಸುವಂತೆ ಹಲವಾರು ಸಂಸ್ಥೆಗಳಿಗೆ ಹಾಗೂ ಉದ್ಯಮಿಗಳಿಗೆ ಚೆಸ್ಕಾಂ ಸಂಸ್ಥೆ ಪ್ರೇರಣೆ ನೀಡುತ್ತಿದೆ. ಎ.ಪಿ.ಸಿ.ಎಂ.ಎಸ್.ನಿಂದ ದಿನನಿತ್ಯ ಸುಮಾರು 258 ಯೂನಿಟ್ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಾಣ ಮಾಡಲಾಗಿದೆ. ಒಟ್ಟು 42 ಕೆ.ವಿ. ವಿದ್ಯುತ್ ಸಾಮಥ್ರ್ಯ ಹೊಂದಿರುವ ಘಟಕ ಉತ್ಪಾದನೆಯ ಶೇ. 90 ವಿದ್ಯುತ್ ಅನ್ನು ಯೂನಿಟ್ ಗೆ 6.61 ರೂ.ಗಳಂತೆ ನೀಡಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆÉ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಕೆ.ಎಂ. ಪ್ರಸನ್ನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಗು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಹೆಚ್.ಡಿ. ರವಿಕುಮಾರ್, ತಾಲೂಕು ಸಿಡಿಓ ಮೋಹನ್, ಚೆಟ್ಟಳ್ಳಿ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಬಿ.ಎಂ. ಪಾರ್ವತಿ ಅವರು, ರೈತ ಸಹಕಾರ ಭವನದಲ್ಲಿ ಸುಮಾರು 55 ಲಕ್ಷ ರೂ ವೆಚ್ಚದಲ್ಲಿ 10 ಕೊಠಡಿಗಳ ನೂತನ ವಸತಿ ಗೃಹ ಹಾಗೂ ಮಿನಿ ಸಭಾಂಗಣವನ್ನು ನಿರ್ಮಿಸಲಾಗಿದೆ. 75 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಸುಮಾರು ರೂ. 24 ಲಕ್ಷ ವೆಚ್ಚದ ಸುಸಜ್ಜಿತ ಭೋಜನಾ ಶಾಲೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಟಿ. ಕೃಷ್ಣರಾಜು, ನಿರ್ದೇಶಕರಾದ ಹೆಚ್.ಬಿ. ಚಂದ್ರಪ್ಪ, ಟಿ.ಕೆ. ರಘು, ಎ.ಪಿ. ನೀಲಮ್ಮ, ಬಿ. ಸರೋಜ, ಟಿ.ಬಿ. ಜಗದೀಶ್, ಆರ್.ಕೆ. ಚಂದ್ರ, ಬಿ.ಎಂ. ಸೋಮಯ್ಯ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಎಂ.ಎಸ್. ಕುಮಾರಪ್ಪ, ಹಾಗೂ ಬಿ.ಎಸ್. ಚಂದ್ರಶೇಖರ್ ಇದ್ದರು. ಸಂಘದ ನಿರ್ದೇಶಕ ಜಗದೀಶ್ ಸ್ವಾಗತಿಸಿ, ವಂದಿಸಿದರು.