ರಾಷ್ಟ್ರೀಯ ಸೇವಾ ಯೋಜನೆ ಎನ್ನುವದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ.

‘ಸೇವೆಯ ಸವಿಜೇನ ಸವಿಯೋಣ ಬನ್ನಿ, ಸೇವೆಯ ಸವಿಜೇನ ಹಂಚೋಣ ಬನ್ನಿ’ ಎನ್ನುತ್ತಲೇ ಇಂದು ರಾಷ್ಟ್ರದಾದ್ಯಂತ ಯುವಜನತೆಯಲ್ಲಿ ಸೇವಾ ಮನೋಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರೀಯ ಸೇವಾ ಯೋಜನೆಗೆ ಈಗ 49ರ ಸಂಭ್ರಮ.

ವಿದ್ಯಾರ್ಥಿ ಮತ್ತು ಸಮಾಜದ ನಡುವಿನ ರಚನಾತ್ಮಕವಾದ ಸಂಬಂಧ ಬೆಳೆಯಬೇಕೆಂಬ ಉದ್ದೇಶದಿಂದ ಭಾರತದಾದ್ಯಂತ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ತಾ. 24 ರಂದು (ಇಂದು) ಆಚರಿಸಲಾಗುತ್ತದೆ.

ಕಲಿಕೆ ಎನ್ನುವದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು ಎಂಬ ಆಶಯದೊಂದಿಗೆ, ಸ್ವಯಂ ಪ್ರೇರಿತರಾಗಿ ಸಮುದಾಯ ಸೇವಾಭಾವನೆ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆಯನ್ನು ಜಾರಿಗೆ ತರಲಾಯಿತು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸಿನ ಕಲ್ಪನೆಯಾದ ರಾಮರಾಜ್ಯದ ಆಶಯದೊಂದಿಗೆ, ಗಾಂಧೀಜಿಯವರ ಜನ್ಮದಿನದ 100ನೇ ವರ್ಷದಲ್ಲಿ ಅಂದರೆ 1969 ರಲ್ಲಿ ಆರಂಭಿಸಲಾಯಿತು. ಗಾಂಧೀಜಿಯವರು ಸಮಾಜ ಸೇವೆಯನ್ನೇ ಕಾಯಕವಾಗಿ ಮಾಡಿಕೊಂಡು ಅದನ್ನು ಧರ್ಮದಂತೆ ಆಚರಿಸುತ್ತಿದ್ದರು. ಇದರಿಂದಾಗಿಯೇ ಅವರ ಪುಣ್ಯಸ್ಮರಣೆಯ ಗೌರವಾರ್ಥವಾಗಿ ಎನ್.ಎಸ್.ಎಸ್.ನ್ನು ಅವರ ಜನ್ಮ ಶತಮಾನೋತ್ಸವದ ವರ್ಷವಾದ 1969ನೇ ಸೆಪ್ಟೆಂಬರ್ 24 ರಂದು ದೇಶಾದ್ಯಂತ ವಿವಿಧ ರಾಜ್ಯಗಳ 37 ವಿಶ್ವವಿದ್ಯಾನಿಲಯಗಳಲ್ಲಿ ಪ್ರಾರಂಭಿಸಲಾಯಿತು. ಈ ಕಾರಣಕ್ಕಾಗಿಯೇ ಸೆಪ್ಟೆಂಬರ್ 24 ನ್ನು ಎನ್.ಎಸ್.ಎಸ್ ದಿನ ಎಂದು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

1969 ರಲ್ಲಿ ಎನ್.ಎಸ್.ಎಸ್. ಆರಂಭದ ದಿನಗಳಲ್ಲಿ ಕೇವಲ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಎನ್.ಎಸ್.ಎಸ್ ಕ್ರಮೇಣ ವೈದ್ಯಕೀಯ, ಪಾಲಿಟೆಕ್ನಿಕ್, ನರ್ಸಿಂಗ್, ಬಿ.ಯೆಡ್, ಡಿ.ಯೆಡ್ ಮತ್ತು ಪದವಿಪೂರ್ವ ತರಗತಿಗಳಿಗೂ ವಿಸ್ತಾರಗೊಂಡು ಇಂದು ನಮ್ಮ ದೇಶದಲ್ಲಿ ಎನ್.ಎಸ್.ಎಸ್. ಬಹಳ ವಿಸ್ತಾರವಾಗಿ ಬೆಳೆದು ರಾಷ್ಟ್ರದ ಅತೀ ದೊಡ್ಡದಾದ ಯುವ ಸಂಘಟನೆಯಾಗಿ ಹೊರಹೊಮ್ಮಿದೆ.

ಎನ್.ಎಸ್.ಎಸ್.ನಿಂದ ಏನು ಲಾಭ?

ಎನ್.ಎಸ್.ಎಸ್.ಗೆ ಸೇರಿದವರಿಗೆ ಸೇರುವ ಮೊದಲು ಉದ್ಭವಿಸುವ ಪ್ರಶ್ನೆಯಿದು. ಸಮಾಜ ಸೇವೆಯಿಂದ ನಮಗೇನು ಲಾಭವೆಂದು ಅದರಲ್ಲಿ ತೊಡಗಿದ ಮೇಲೆ ಗೊತ್ತಾಗುವದು.

ಶಿಸ್ತು, ಸಮಯ ಪ್ರಜ್ಞೆ, ಸಹಬಾಳ್ವೆ, ಹೊಂದಾಣಿಕೆ, ಶ್ರಮದ ಮಹತ್ವ, ಪರಿಣಾಮಕಾರಿ ಭಾಷಣ ಕಲೆ, ಸಭಾಕಂಪನ ನಿವಾರಣೆ, ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ, ರಾಷ್ಟ್ರ ಭಕ್ತಿ, ಜೀವನ ಶೈಲಿ, ಎನ್.ಎಸ್.ಎಸ್. ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿಕೊಂಡು ಬಂದಿದೆ.

ಕಲಿಕಾ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಆತನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುವದಕ್ಕೆ ಜೀವಂತ ನಿದರ್ಶನವೇ ಎನ್.ಎಸ್. ಎಸ್. ‘ನನಗಲ್ಲ ನಿನಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆಯ ಮೂಲಕ ಶಿಕ್ಷಣ-ಶಿಕ್ಷಣದ ಮೂಲಕ ಸೇವೆ ಎಂಬ ಮೂಲಮಂತ್ರವನ್ನು ಎನ್.ಎಸ್. ಎಸ್. ಹೊಂದಿದೆ.

ಎನ್.ಎಸ್.ಎಸ್. ಎನ್ನುವದೊಂದು ಜೀವನ ಆದರ್ಶವೆಂದರೆ ತಪ್ಪಗಲಾರದು. ಕಾಲೇಜಿನಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಸಹಕಾರ, ಸೌಹಾರ್ದತೆಯನ್ನು ಉಳಿಸಿ, ಬೆಳೆಸಿದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುವಲ್ಲಿ ಎರಡು ಮಾತಿಲ್ಲ.

ರಾಷ್ಟೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿರುತ್ತಾರೆ. ಎನ್. ಎಸ್.ಎಸ್. ಎಂಬದು ಒಂದು ಬಯಲು ವಿಶ್ವವಿದ್ಯಾಲಯ ಇಲ್ಲಿ ಪುಸ್ತಕ ಜ್ಞಾನದ ಜೊತೆಗೆ ಬದುಕುವ ಕಲೆಯನ್ನು ಕಲಿಸಿಕೊಡಲಾಗುತ್ತದೆ. ಸ್ವಯಂಸೇವಕರು ಪ್ರತಿಫಲವಿಲ್ಲದೆ ಮಾಡುವ ಸೇವೆ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿಯಮಾನುಸಾರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಮಾತ್ರ ‘ಸ್ಟೂಡೆಂಟ್ ಲೈಪ್ ಈಸ್ ಗೋಲ್ಡನ್ ಲೈಫ್’ ಆಗಲು ಸಾಧ್ಯ. ಒಂದು ಬಾರಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆಂದರೆ, ಅಲ್ಲಿಂದ ಹೊರಬರುವದೇ ಇಲ್ಲ. ಅಧಿಕೃತವಾಗಿ ಎನ್. ಎಸ್.ಎಸ್.ನ್ನು ಬಿಟ್ಟರು ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಅವರು ಎನ್.ಎಸ್.ಎಸ್.ನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತಾರೆ. ಏಕೆಂದರೆ ಎನ್.ಎಸ್.ಎಸ್. ಅಂತಹ ಬಾಂಧವ್ಯದ ಗಂಟನ್ನು ಬಿಗಿದುಬಿಡುತ್ತದೆ.

ಎನ್.ಎಸ್.ಎಸ್.ಗೆ ಪ್ರವೇಶ ಪಡೆದು ಎರಡು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡರೆ 240 ಗಂಟೆಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ವಿವಿಧ ರೀತಿಯ ಮಾಹಿತಿ ಶಿಬಿರ, ರಸ್ತೆ ಸುರಕ್ಷತೆ, ಸ್ವಚ್ಛತೆ, ನಾಗರಿಕ ಪ್ರಜ್ಞೆಯ ಅರಿವು, ದತ್ತುಗ್ರಾಮ ಸ್ವೀಕಾರ, ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಪ್ರಬುದ್ಧರಾಗಬಹುದು. ಇನ್ನು ವಾರ್ಷಿಕ ವಿಶೇಷ ಶಿಬಿರದ ಗೌಜಿ ಗಮ್ಮತ್ತೇ ಬೇರೆ 7 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಯಾವದಾದರು ಹಳ್ಳಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಅಲ್ಲಿನ ಪರಿಸರದ ಸ್ವಚ್ಛತೆ, ಕೈತೋಟ ನಿರ್ಮಾಣ, ಆಟದ ಮೈದಾನದ ವಿಸ್ತರಣೆ ಮಾತ್ರವಲ್ಲದೆ, ಊರಿನ ಜನರಿಗೆ ವಿವಿಧ ಮಾಹಿತಿ ಶಿಬಿರಗಳು, ಶಾಲಾ ಮಕ್ಕಳಿಗೆ ಕಾರ್ಯಕ್ರಮಗಳು, ಆರೋಗ್ಯ ಶಿಬಿರ, ಉರಗ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಊರಿನ ಮನೆ ಮನೆಗೆ ತೆರಳಿ ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಆ ವರದಿಯನ್ನು ಸರಕಾರಕ್ಕೆ ಒಪ್ಪಿಸುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಲಾಗುತ್ತದೆ. ಶಿಬಿರದ ಮೇಲ್ವಿಚಾರಣೆಗೆ ಯೋಜನಾಧಿಕಾರಿಗಳಿರುತ್ತಾರಾದರೂ ಅಡುಗೆ ತಯಾರಿ, ಲೆಕ್ಕಪತ್ರ ನಿರ್ವಹಣೆ, ಕಾರ್ಯಕ್ರಮಗಳ ಆಯೋಜನೆ ಎಲ್ಲವೂ ಸ್ವಯಂ ಸೇವಕ/ಸೇವಕಿಯರಿಂದಲೇ ನಡೆಯುತ್ತದೆ.

ಎನ್.ಎಸ್. ಎಸ್.ನ ಏಕದಿನ ಶಿಬಿರಗಳು ಸ್ವಯಂಸೇವಕರಲ್ಲಿ ಪ್ರಾರಂಭದಲ್ಲಿದ್ದ ಆತಂಕ, ಭಯವನ್ನು ದೂರ ಮಾಡಿದರೆ, ವಾರ್ಷಿಕ ವಿಶೇಷ ಶಿಬಿರಗಳು ಸ್ವಯಂಸೇವಕರಲ್ಲಿ ಹೊಂದಾಣಿಕೆ, ಸಹಬಾಳ್ವೆ, ಒಗ್ಗಟ್ಟು, ಕಾರ್ಯಕ್ರಮ ನಿರ್ವಹಣೆ, ಸಹಕಾರ, ಸೇವಾ ಮನೋಭಾವ ಕಲಿಸುವ ಜೊತೆಗೆ ನಮ್ಮಲ್ಲಿ ಸೃಜನಶೀಲತೆಯನ್ನು ಹುಟ್ಟುಹಾಕುತ್ತದೆ.

- ಮತ್ರಂಡ ಹರ್ಷಿತ್ ಪೂವಯ್ಯ, ಪೊನ್ನಂಪೇಟೆ