*ಸಿದ್ದಾಪುರ, ಸೆ. 23: ಸರ್ಕಾರ ಒದಗಿಸಿದ್ದ ನೆರೆ ಪರಿಹಾರ ಸಾಮಗ್ರಿಗಳ ವಿತರಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಲೋಪ ಎಸಗಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ ನೇತೃತ್ವದಲ್ಲಿ ಅಭ್ಯತ್‍ಮಂಗಲ ಗ್ರಾಮದ ಒಂದು ಮತ್ತು ಎರಡನೇ ವಾರ್ಡ್‍ನ ಪಂಚಾಯಿತಿ ಸದಸ್ಯರು ಆಹಾರ ಇಲಾಖೆಯ ವಿರುದ್ಧ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

ನಂತರ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್ ಮೂಲಕ ಅಹಾರ ಇಲಾಖೆ ಅಧಿಕಾರಿಗಳಿಗೆ ಸಮರ್ಪಕವಾಗಿ ಮತ್ತು ಶೀಘ್ರದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸುವಂತೆ ಮನವಿ ಪತ್ರ ಸಲ್ಲಿಸಿದರು.

ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಒಟ್ಟು ನಾಲ್ಕು ವಾರ್ಡ್‍ಗಳನ್ನು ಹೊಂದಿದ್ದು ವಾಲ್ನೂರು-ತ್ಯಾಗತ್ತೂರು ವಾರ್ಡ್‍ಗೆ ಆಹಾರ ಕಿಟ್ ಮತ್ತು ಸೀಮೆಎಣ್ಣೆ ಈಗಾಗಲೇ ನೀಡಲಾಗಿದೆ. ಆದರೆ ಅಭ್ಯತ್‍ಮಂಗಲ ಗ್ರಾಮದ ಎರಡು ವಾರ್ಡ್‍ಗಳಿಗೆ ಯಾವದೇ ಆಹಾರ ಮತ್ತು ಇತರ ಸಾಮಗ್ರಿಗಳನ್ನು ನೀಡದೇ ವಂಚಿಸಲಾಗಿದೆ ಎಂದು ದೂರಿದರು. ಈ ವಾರ್ಡ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕೂಲಿ ಕಾರ್ಮಿಕರಿದ್ದು ಅತಿವೃಷ್ಟಿಯಿಂದ ಕೆಲಸ ಹಾಗೂ ದಿನಗೂಲಿ ಇಲ್ಲದೇ ದಿನ ಕಳೆಯುವಂತಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ವಯೋವೃದ್ಧರು ಕೂಡ ಆಹಾರದ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿಂದ ಪರಿತಪಿಸುತ್ತಿದ್ದಾರೆ. ಆಹಾರ ಇಲಾಖೆ ಒಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಾರ್ಡ್‍ಗಳಿಗೆ ತಾರತಮ್ಯ ಧೋರಣೆ ಅನುಸರಿಸದೇ ಆಹಾರ ವಿತರಿಸಬೇಕಿದೆ ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ಸತೀಶ್, ದಿನೇಶ್, ಯಶೋಧ, ನಳಿನಿ, ಜಮೀಲ ಉಪಸ್ಥಿತರಿದ್ದರು.