ಮಡಿಕೇರಿ, ಸೆ. 23: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನದ ಅಂಗವಾಗಿ ಗ್ರೀನ್ ಸಿಟಿ ಫೋರಂ ಸಂಘಟನೆ ಹಮ್ಮಿಕೊಂಡಿರುವ ಮಡಿಕೇರಿ ಕೋಟೆ ಸ್ವಚ್ಛತಾ ಅಭಿಯಾನದ 3ನೇ ದಿನ ಜಿಲ್ಲೆಯ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ 50 ಎನ್‍ಸಿಸಿ ಕೆಡೆಟ್‍ಗಳು ಮೇಜರ್ ರಾಘವ ಮುಂದಾಳತ್ವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ವಿ. ಮಲ್ಲಪುರ, ಹೆಚ್ಚುವರಿ ನ್ಯಾಯಾಧೀಶ ಡಿ.ಪವನೇಶ್, ಹಿರಿಯ ಸಿವಿಲ್ ಮತ್ತು ಸಿಜೆಎಂ ವಿಜಯಕುಮಾರ್, ಜೆಎಂಎಫ್‍ಸಿ ನ್ಯಾಯಾಧೀಶ ಡಿ.ಕೆ. ಮನು ಶ್ರಮದಾನದಲ್ಲಿ ಪಾಲ್ಗೊಳ್ಳುವದರ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿದರು. ಮಡಿಕೇರಿ ವಕೀಲರ ಸಂಘ ಅಧ್ಯಕ್ಷ ಕಾರೇರ ಕವನ್, ಪ್ರಧಾನ ಕಾರ್ಯದರ್ಶಿ ಬಿ.ಜಿ. ಕಿಶೋರ್, ನ್ಯಾಯಾಂಗ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ಪ, ಪ್ರಮುಖ ರಾದ ಜಯರಾಮ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಸೋಮವಾರ ದಿಂದ ನಡೆಯುವ ಶ್ರಮದಾನದಲ್ಲಿ ವಕೀಲರೊಂದಿಗೆ ತಾನು ಖುದ್ದು ಪಾಲ್ಗೊಳ್ಳುವದಾಗಿ ಕವನ್ ಘೋಷಿಸಿದರು.

ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ಸ್ವಚ್ಛತಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಗ್ರೀನ್ ಸಿಟಿ ಫೋರಂ ನಿರ್ದೇಶಕಿ ಮೋಂತಿ ಗಣೇಶ್ ಎನ್‍ಸಿಸಿ ಕೆಡೆಟ್ ಗಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ (ಮೊದಲ ಪುಟದಿಂದ) ಪಾಲ್ಗೊಂಡಿದ್ದರು. ಸ್ವಚ್ಛತೆ ಕಾಪಾಡುವ ಬಗ್ಗೆ ಗ್ರೀನ್ ಸಿಟಿ ಫೋರಂ ನಿರ್ದೇಶಕ ಕುಕ್ಕೇರ ಜಯ ಚಿಣ್ಣಪ್ಪ, ಎನ್‍ಸಿಸಿ ಕೆಡೆಟ್‍ಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಸವಿತಾ ಭಟ್, ನಿರ್ದೇಶಕರಾದ ಮಾದೇಟಿರ ತಿಮ್ಮಯ್ಯ, ಕಿರಿಯಮಾಡ ರತನ್ ತಮ್ಮಯ್ಯ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.