ಮಡಿಕೇರಿ, ಸೆ. 23: ಮಳೆಗಾಲದ ನಡುವೆ ಕಂಡುಕೇಳರಿಯದ ಪ್ರಾಕೃತಿಕ ವಿಕೋಪ ಸಂದರ್ಭ ಕೊಡಗಿನ ಜನತೆಯೊಂದಿಗೆ, ಹೊರಗಿನ ದಾನಿಗಳು ಯಾವದೇ ಬೇಧಭಾವವಿಲ್ಲದೆ ಸಹಿಷ್ಣುತೆ ಮೆರೆದಿರುವದು ಅತ್ಯಂತ ಶ್ಲಾಘನೀಯವೆಂದು, ಇಲ್ಲಿನ ಕ್ರೆಸೆಂಟ್ ಶಾಲೆಯಲ್ಲಿ ಇಂದು ಆಯೋಜಿಸಿದ್ದ ಉಚಿತ ವೈದ್ಯಕೀಯ ಮಹಾಶಿಬಿರದಲ್ಲಿ ಶ್ಲಾಘನೆ ವ್ಯಕ್ತವಾಯಿತು. ಮಡಿಕೇರಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ಮಾತನಾಡಿ, ಜಿಲ್ಲಾಡಳಿತ ಮತ್ತು ಪೊಲೀಸ್ ಸಹಿತ ಎಲ್ಲ ಇಲಾಖೆಗಳೊಂದಿಗೆ, ಸಂಘ ಸಂಸ್ಥೆಗಳು ಯಾವ ಬೇಧಭಾವ ತೋರದೆ ನೆರವು ಕಲ್ಪಿಸಲು ಶ್ರಮಿಸಿದ್ದಾಗಿ ಕೊಂಡಾಡಿದರು.ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀರೋಗ ತಜ್ಞೆ ಡಾ. ಗೀತಾದೊಪ್ಪ ಮಾತನಾಡಿ, ಕೊಡಗಿಗೆ ಎದುರಾಗಿರುವ ಪ್ರಾಕೃತಿಕ ಹಾನಿ ಸಂದರ್ಭ ಸಂತ್ರಸ್ತರ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಕೆವಿಜಿ ಸಂಸ್ಥೆ ಎಲ್ಲ ರೀತಿ ಸಹಕಾರ ಕಲ್ಪಿಸುತ್ತಾ ಬಂದಿರುವದಾಗಿ ಅಭಿಪ್ರಾಯಪಟ್ಟರು. ಜನತೆ ಈ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತೆಯೂ ಕರೆ ನೀಡಿದರು.

ಮಂಗಳೂರು ವಲಯ ಜಮಾತೇ ಇಸ್ಲಾಮಿ ಹಿಂದ್ ಸಂಚಾಲಕ ಅಬ್ದುಲ್ ಸಲಾಂ ಮಾತನಾಡಿ, ಎಲ್ಲರ ಸಹಕಾರದಿಂದ ನೊಂದವರ ಸೇವೆ ಸಾಧ್ಯವಾಗಿದ್ದು, ಭವಿಷ್ಯದಲ್ಲಿ ಕೊಡಗಿನ ಸಹಿಷ್ಣುತೆ ಕಾಪಾಡುವ ದಿಕ್ಕಿನಲ್ಲಿ ಸಮಾವೇಶ ಹಮ್ಮಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಡಾ. ಸತೀಶ್ ಶಿವಮಲ್ಲಯ್ಯ ಪ್ರಾಸ್ತಾವಿಕ ನುಡಿಯೊಂದಿಗೆ ಶಿಬಿರದ ಉದ್ದೇಶ ತಿಳಿಸಿದರು. ಪ್ರಮುಖರುಗಳಾದ ಡಾ. ಮೋಹನ್ ಅಪ್ಪಾಜಿ, ಮರಕಡ ಮಹಮ್ಮದ್, ಬಿ.ಎ. ಷಂಶುದ್ದೀನ್, ಕೆ.ಜೆ. ಪೀಟರ್, ಅಪ್ಸರ್, ಮೋಕ್ಷಿತಾ, ಅಬ್ದುಲ್ ಹಕೀಂ ಮೊದಲಾದವರು ಪಾಲ್ಗೊಂಡು ಮಾತನಾಡಿದರು. ಸುಮಾರು 45 ವೈದ್ಯರ ತಂಡ 9ಕ್ಕೂ ಅಧಿಕ ಸಮಸ್ಯೆಗಳ ಸಂಬಂಧ ನೂರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಕಲ್ಪಿಸಿದರು. ವಿವಿಧ ಸಂಘ ಸಂಸ್ಥೆಗಳು ಶಿಬಿರದ ಯಶಸ್ಸಿಗೆ ಕೈ ಜೋಡಿಸಿತು.