ಮಡಿಕೇರಿ, ಸೆ. 23: ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಹಟ್ಟಿಹೊಳೆಯ ತಟದಲ್ಲಿ ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ನಿರ್ಮಲ ಆಂಗ್ಲಮಾದ್ಯಮ ವಿದ್ಯಾಲಯವು, ಆ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಅನಾಹುತಗಳ ನಡುವೆ ಸುಂಟಿಕೊಪ್ಪದಲ್ಲಿ ತಾತ್ಕಾಲಿಕ ವ್ಯವಸ್ಥೆಯಡಿ ಮುಂದುವರಿದಿದೆ. ಪ್ರಾಕೃತಿಕ ವಿಕೋಪದ ನಡುವೆಯೂ ಈ ವಿದ್ಯಾಸಂಸ್ಥೆಗೆ ದೇವರ ದಯೆಯಿಂದ ಯಾವ ಹಾನಿ ಸಂಭವಿಸದಿದ್ದರೂ, ನಿತ್ಯ ಶಾಲೆಗೆ ಬರಬೇಕಿದ್ದ ಮಕ್ಕಳಿಗೆ ರಸ್ತೆ ಸಂಪರ್ಕವಿಲ್ಲದೆ ತೊಂದರೆಯಲ್ಲಿ ಸಿಲುಕುವಂತಾಗಿತ್ತು.ಆ ಕಾರಣದಿಂದ ಸಂಸ್ಥೆಯ ಪ್ರಮುಖರು ಪೋಷಕರ ಸಭೆ ನಡೆಸಿ, ಎಲ್ಲರ ಸಮ್ಮತಿಯೊಂದಿಗೆ ಸುಂಟಿಕೊಪ್ಪದ ಸಂತಮೇರಿ ಶಾಲಾ ಕಟ್ಟಡಕ್ಕೆ ಈ ಶಾಲೆಯ ಮಕ್ಕಳನ್ನು ಸ್ಥಳಾಂತರಗೊಳಿಸಿ ಸದ್ಯದ ಮಟ್ಟಿಗೆ ಪಾಠಪ್ರವಚನಗಳನ್ನು ನಡೆಸಿಕೊಂಡು ಬರುವಂತಾಗಿದೆ. ಇದೀಗ ರಸ್ತೆಗಳ ದುರಸ್ತಿ ಕೆಲಸ ಮುಕ್ತಾಯ ಹಂತದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಶಾಲಾ ಮುಖ್ಯಸ್ಥರನ್ನು ‘ಶಕ್ತಿ’ ಸಂದರ್ಶಿಸಿತು.

ಈ ವೇಳೆ ಅಲ್ಲಿನ ಮುಖ್ಯಸ್ಥರಾದ ವಿಲಿಯಂ ಅಲ್ಬ್‍ಕರ್ಕ್ ಹಾಗೂ ಜರಾಲ್ಡ್ ಸೆಕ್ವೇರಾ ಅಭಿಪ್ರಾಯ ನೀಡುತ್ತಾ, ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಮುಂದಿನ ಅಕ್ಟೋಬರ್ ಮೊದಲ ವಾರದಲ್ಲಿ ಭಾರೀ ಮಳೆಯು ಮತ್ತೊಮ್ಮೆ ಎದು ರಾಗಲಿದೆ ಎಂಬ ಸುದ್ದಿಯ ಹಿನ್ನೆಲೆ, ಅದುವರೆಗೂ ಸುಂಟಿಕೊಪ್ಪದಲ್ಲೇ ಮಕ್ಕಳಿಗೆ ಶಿಕ್ಷಣ ಮುಂದುವರಿಸುವದ ರೊಂದಿಗೆ, ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಹಟ್ಟಿಹೊಳೆ ವಿದ್ಯಾಲಯಕ್ಕೆ ಸ್ಥಳಾಂತರಿಸುವ ಇಂಗಿತ ವ್ಯಕ್ತಪಡಿಸಿದರು.

ಎಲ್‍ಕೆಜಿಯಿಂದ 10ನೇ ತರಗತಿಯವರೆಗೆ ಪ್ರಕೃತಿ ರಮಣೀಯ ತಾಣದ ಹಟ್ಟಿಹೊಳೆಯಲ್ಲಿ ಕಲಿಯುತ್ತಿದ್ದ ಸುಮಾರು 600 ವಿದ್ಯಾರ್ಥಿಗಳು, ಇಂದು ಕಿಷ್ಕಿಂಧೆಯಲ್ಲಿ ನಿತ್ಯದ ಪಠ್ಯಕ್ರಮ ಕಲಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರುಗಳು, ಶಾಲಾ ಪರಿಸರದಲ್ಲಿ ಹಾಗೂ ಹಟ್ಟಿಹೊಳೆಯಲ್ಲಿ ಒಂದು ತಿಂಗಳಿನಿಂದ ಮಕ್ಕಳ ಸಹಿತ ಜನತೆಯ ಓಡಾಟವಿಲ್ಲದೆ ಬಿಕೋ ಎನ್ನುತ್ತಿದೆ ಎಂದು ಮಾರ್ನುಡಿದರು.

ಈಗಾಗಲೇ ತಮ್ಮ ವಿದ್ಯಾಲಯಕ್ಕೆ ರಸ್ತೆ ಸಂಪರ್ಕ ಕಡಿದುಕೊಂಡು, ಸುಂಟಿಕೊಪ್ಪಕ್ಕೆ ಶಾಲೆಯನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ನಡುವೆ ಸುಮಾರು 50 ಮಕ್ಕಳು ಬೇರೆಡೆಗೆ ವರ್ಗಾವಣೆ ಪತ್ರದೊಂದಿಗೆ ತೆರಳಿದ್ದಾಗಿ ವಿಷಾದಿಸಿದ ಪ್ರಮುಖರು, ವಿದ್ಯಾಲಯ

(ಮೊದಲ ಪುಟದಿಂದ) ಮತ್ತೆ ಪುನರಾರಂಭಗೊಂಡರೆ ಮಕ್ಕಳು ಅಲ್ಲಿಗೆ ಮರಳುವ ವಿಶ್ವಾಸ ಹೊರಗೆಡವಿದರು. ಅನೇಕ ಮಕ್ಕಳ ಪೋಷಕರು ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಸಂತ್ರಸ್ತರಾಗಿ ಕಷ್ಟಕ್ಕೆ ಸಿಲುಕುವಂತಾಯಿತು ಎಂದು ಪರಿಸ್ಥಿತಿಯನ್ನು ನೆನಪಿಸಿಕೊಂಡ ಶಾಲಾ ಮುಖ್ಯಸ್ಥರು, ಕೊಡಗಿನಲ್ಲಿ ಹಿಂದಿನ ಪರಿಸ್ಥಿತಿ ಮರು ನಿರ್ಮಾಣದೊಂದಿಗೆ, ಸಹಜದೆಡೆಗೆ ಬರುವಲ್ಲಿ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ವ್ಯಾಖ್ಯಾನಿಸಿದರು. ಇಂತಹ ಪರಿಸ್ಥಿತಿಯಲ್ಲಿ ಸರಕಾರ, ಜಿಲ್ಲಾಡಳಿತ, ಇತರೆಡೆಯ ದಾನಿಗಳ ಸಹಿತ ಜಿಲ್ಲೆಯ ಶಾಸಕರು, ಇತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪಾತ್ರವನ್ನು ಶ್ಲಾಘಿಸಿದ ಪ್ರಮುಖರು, ದೇವರು ಎಲ್ಲರನ್ನು ಸಂಕಷ್ಟದಿಂದ ಪಾರುಗೊಳಿಸಿ ನೆಮ್ಮದಿಯ ಬದುಕು ಮರುಕಲ್ಪಿಸುವಂತೆ ಪ್ರಾರ್ಥಿಸುತ್ತಾ, ಪ್ರತಿಯೊಬ್ಬರು ತಾಳ್ಮೆವಹಿಸಬೇಕೆಂದು ಸಲಹೆ ನೀಡಿದರು. ಇಂದು ಒತ್ತಡದಲ್ಲಿ ತಮ್ಮ ಶಾಲಾ ಶಿಕ್ಷಕರೊಂದಿಗೆ, ಮಕ್ಕಳಿಗೆ ಆದ ಅನಾನುಕೂಲಕ್ಕಾಗಿ ತೀವ್ರ ಬೇಸರವಿದೆ ಎಂದು ನುಡಿಯುತ್ತಾ, ‘ಶಕ್ತಿ’ ಪತ್ರಿಕಾಲಯಕ್ಕೂ ಪ್ರಾಕೃತಿಕ ವಿಕೋಪದಿಂದ ತೊಂದರೆ ಉಂಟಾಗಿದ್ದ ಬಗ್ಗೆ ಕಳವಳ ವ್ಯಕ್ತಪಡಿಸಿದರು.