ವೀರಾಜಪೇಟೆ, ಸೆ. 22: ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಮನೆಯಿಂದ ಪ್ರಾರಂಭಗೊಳ್ಳಬೇಕು. ಆಗ ಮಾತ್ರ ಮನೆ, ಗ್ರಾಮ, ದೇಶ ಸ್ವಚ್ಛತೆಗೊಳ್ಳುವದು ಎಂದು ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಹೇಳಿದರು.
ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸಿಂಪಿ ಮಾತನಾಡಿ ಸ್ವಚ್ಛತೆಯನ್ನು ಸ್ಥಳೀಯ ಪಂಚಾಯಿತಿ-ಸರಕಾರದವರೇ ಮಾಡಬೇಕೆಂದಿಲ್ಲ, ಸ್ವಚ್ಛತೆ ಎಂಬದು ಪ್ರತಿಯೊಬ್ಬರ ಮನಸ್ಸಿನಲ್ಲಿ ಬರಬೇಕು. ಶುದ್ದವಾದ ಕುಡಿಯುವ ನೀರು, ಶುದ್ಧ ಆಹಾರ ಸೇವಿಸುವ ಮೂಲಕ ಅರೋಗ್ಯವನ್ನು ಕಾಪಾಡಿ ಕೊಳ್ಳುವಂತಾಗಬೇಕು ಎಂದರು.
ವಕೀಲ ಬಿ.ಎಸ್. ಪುಷ್ಪರಾಜ್ ಮಾತನಾಡಿ, ಹಿಂದೂ ಧರ್ಮದಲ್ಲಿ ಯಾವದೇ ಶುಭಕಾರ್ಯಗಳನ್ನು ಮಾಡುವಾಗ ಗಣಪತಿಯನ್ನು ಮೊದಲು ಪೂಜಿಸುವದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಭಕ್ತರಿಗೆ ಬೇಗ ಒಲಿಯುವ ದೇವರು ಗಣಪತಿಯೇ ಆಗಿದ್ದು, ಸರ್ವ ವಿಘ್ನ ನಾಶಕ ವಿಘ್ನೇಶ್ವರ ಎಲ್ಲರಿಗೂ ವಿದ್ಯೆ ಸಕಲ ಐಶ್ವರ್ಯವನ್ನು ನೀಡಲಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎನ್.ಜಿ. ಕಾಮತ್, ಮಕ್ಕಳ ತಜ್ಞ ಡಾ. ದೀಪಕ್, ರವಿರಾಜ್ ಗ್ಯಾಸ್ ಏಜೆನ್ಸಿಯ ವಿಷ್ಣು ಇವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಬಿ.ಎಂ. ಶ್ರೇಯಸ್ ಅವರ ನಿರ್ದೇಶನದಲ್ಲಿ ಈಕ್ಯೂ ಬೀಟ್ಸ್ ಮೆಲೋಡಿ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.