ಕುಶಾಲನಗರ, ಸೆ. 22: ಕುಶಾಲನಗರದ ರೈತ ಸಹಕಾರ ಭವನದಲ್ಲಿ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಹಾಸಭೆ ಗೊಂದಲದ ನಡುವೆ ಮುಂದೂಡಲಾಯಿತು. ಸಂಘದ ಅಧ್ಯಕ್ಷ ಕೆ.ಎಂ. ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಜೆಂಡಾದ ಬೈಲಾ ತಿದ್ದುಪಡಿಯ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಕಳೆದ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಬೈಲಾ ತಿದ್ದುಪಡಿಯ ಬಗ್ಗೆ ಅನುಮೋದನೆ ದೊರೆತಿದ್ದರೂ ಸಹ ಈ ಸಾಲಿನಲ್ಲಿ ಬೈಲಾ ತಿದ್ದುಪಡಿಯ ಕುರಿತು ಅಜೆಂಡಾವನ್ನು ಇಟ್ಟಿರುವ ಬಗ್ಗೆ ಅಧ್ಯಕ್ಷರೊಂದಿಗೆ ಸ್ಪಷ್ಟನೆ ಬಯಸಿದರು. ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಸಭೆಯಲ್ಲಿದ್ದ ಸದಸ್ಯರ ನಡುವೆ ಪರ-ವಿರೋಧ ಚರ್ಚೆ ನಡೆಯಿತು.

ಸುಂಟಿಕೊಪ್ಪ, ನಂಜರಾಯಪಟ್ಟಣ, ಕುಶಾಲನಗರ ವ್ಯಾಪ್ತಿಗೆ ಈಗಾಗಲೇ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯ ಬಗ್ಗೆ ಸ್ಥಾನ ಗುರುತಿಸಲಾಗಿತ್ತು. ಆದರೆ, ಕುಶಾಲನಗರ ವಲಯದಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವದರಿಂದ ಈ ಭಾಗಕ್ಕೆ ಹೆಚ್ಚು ಸ್ಥಾನಗಳನ್ನು ಕೊಡಬೇಕು ಎಂಬದು ಸದಸ್ಯರ ಒತ್ತಾಯ ಕೇಳಿಬಂತು. ಕಳೆದ 20 ವರ್ಷಗಳಿಂದ ಆಡಳಿತ ಮಂಡಳಿಯ ಸ್ಥಾನಗಳು 11 ರಿಂದ 13 ಕ್ಕೆ ಏರಿರುವದರಿಂದ ಈ ಸಾಲಿನ ಬೈಲಾ ತಿದ್ದುಪಡಿಯ ವಿಷಯವಾಗಿ ಸುಂಟಿಕೊಪ್ಪ ಮತ್ತು ಕುಶಾಲನಗರ ವಲಯದ ಸದಸ್ಯರ ನಡುವೆ ಪರ-ವಿರೋಧ ಚರ್ಚೆ ವಿಕೋಪಕ್ಕೆ ತೆರಳಿದ ಹಿನ್ನೆಲೆ ಈ ಬಗ್ಗೆ ಯಾವದೇ ತೀರ್ಮಾನಗಳನ್ನು ಕೈಗೊಳ್ಳಲಾಗದೆ ಗೊಂದಲದೊಂದಿಗೆ ಸಭೆಯನ್ನು ಅಧ್ಯಕ್ಷರು ಮುಂದೂಡಿದರು.