ಭಾಗಮಂಡಲ, ಸೆ. 22: ಕಂದಾಯ ಅಧಿಕಾರಿ ಹಾಗೂ ಗ್ರಾಮಲೆಕ್ಕಿಗರ ನಡುವೆ ಹೊಂದಾಣಿಕೆ ಇಲ್ಲದೇ ಜನಸಾಮಾನ್ಯರ ಕೆಲಸಕಾರ್ಯಗಳು ನಡೆಯುತ್ತಿಲ್ಲ. ಕೂಡಲೇ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಇಂದು ಭಾಗಮಂಡಲದ ಗೌಡಸಮಾಜದಲ್ಲಿ ನಡೆದ ಭಾಗಮಂಡಲ ಗ್ರಾಮಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಇಲ್ಲದ ಕಾರಣ ಅಸಮಾಧಾನಗೊಂಡ ನಾಗರಿಕರು ನಂತರ ನೋಡಲ್ ಅಧಿಕಾರಿ ಸಭೆ ನಡೆಸಲು ಮುಂದಾದರೆ ಕಂದಾಯ ಅಧಿಕಾರಿ ಇಲ್ಲದೆ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು. ಕಂದಾಯ ಪರಿವೀಕ್ಷಕರು ಮಡಿಕೇರಿಯಿಂದ ಭಾಗಮಂಡಲಕ್ಕೆ ಆಗಮಿಸುವವರೆಗೆ ಸಭೆ ನಡೆಯಲು ಅವಕಾಶ ನೀಡಲಿಲ್ಲ. ಸಭೆ ಮುಂದುವರಿಸಲು ಸಭೆಗೆ ಆಗಮಿಸಿದ ಗ್ರಾಮಲೆಕ್ಕಿಗರಿಗೆ ಸಭೆಗೆ ಹೋಗುವಂತೆ ನಿರ್ದೇಶನ ನೀಡಿದರು. ಸಭೆಗೆ ಹಾಜರಾಗದೆ ಮೊದಲು ಮೊಬೈಲು ಸ್ವಿಚ್ಚ್ ಆಫ್ ಮಾಡಿದ್ದು ಸಂಪರ್ಕಕ್ಕೆ ಸಿಗದ ಕಾರಣ ತಾನೇ ಸಭೆಗೆ ಬಂದಿರುವದಾಗಿ ಕಂದಾಯ ಪರಿವೀಕ್ಷಕರು ಹೇಳಿದಾಗ ನೀವು ಅವರ ಮೇಲೆ ತಕ್ಕ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಹೇಳಿದರು.

ಹೊಸೂರು ಸತೀಶ್‍ಕುಮಾರ್ ಮಾತನಾಡಿ, ಭಾಗಮಂಡಲದಲ್ಲಿ ಸುಮಾರು 350 ಇಂಚಿಗೂ ಅಧಿಕ ಮಳೆ ದಾಖಲಾಗಿದ್ದು ತೋಟದ ಹೊರಗಿನಿಂದ ನೋಡಿದರೆ ಹಾನಿ ಕಾಣಿಸದು. ಆದರೆ ರೈತರಿಗೆ ಬೆಳೆಯ ಇಳುವರಿ ಕಡಿಮೆಯಾಗುವದರೊಂದಿಗೆ ಮಳೆಯಿಂದ ಬೆಳೆಹಾನಿಯಾಗಿದ್ದು ದಾಖಲಾತಿ ಇಲ್ಲದ ಮಂದಿಗೂ ಪರಿಹಾರ ದೊರಕುವಂತಾಗಬೇಕು ಎಂದರು. ಇವರೊಂದಿಗೆ ಧ್ವನಿಗೂಡಿಸಿದ ನಾರಾಯಣಾಚಾರ್ ಹಾಗೂ ಪ್ರಕಾಶ್ ಯಾರಿಗೂ ಹೆಚ್ಚುಕಮ್ಮಿ ಆಗದಂತೆ ಪರಿಹಾರ ಒದಗಿಸಿ ಕಂದಾಯ ಇಲಾಖೆಯಿಂದ ಭಾಗಮಂಡಲ ಪ್ರದೇಶದಲ್ಲಿ ಅಧಿಕ ಮಳೆ ಸುರಿದಿದ್ದರೂ ಪರಿಹಾರ ದೊರಕದೇ ಇರುವದಕ್ಕೆ ಕಂದಾಯ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದರು. ಅಲ್ಲದೇ ಸಾಮಾನ್ಯ ನಷ್ಟ ಎಂದು ಭಾಗಮಂಡಲ ವ್ಯಾಪ್ತಿಯನ್ನು ಪರಿಗಣಿಸಿರುವದು ಸರಿಯಲ್ಲ. ಜನಪ್ರತಿನಿಧಿಗಳು ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಪರಿಹಾರಕ್ಕೆ ಬೇಡಿಕೆ ಇಟ್ಟು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಿತ್ತು. ಆದರೆ ನೀವುಗಳು ಗ್ರಾಮದ ಜನತೆಯ ಜವಾಬ್ದಾರಿ ಮರೆತು ವರ್ತಿಸಿದ್ದೀರಿ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್ ಮಾತನಾಡಿ ಕಂದಾಯ ಪರಿವೀಕ್ಷಕರ ಕಚೇರಿಗೆ ತಾನೂ ಕೂಡ ಹೋದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿದರು. ಈ ಸಂದರ್ಭ ಹೊಸೂರು ಸತೀಶ್ ಕುಮಾರ್ ಮಾತನಾಡಿ ರಾಜಕೀಯ ಮಾಡುವವರನ್ನು ವರ್ಗಾವಣೆ ಮಾಡಿ ಎಂದರಲ್ಲದೆ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮಲೆಕ್ಕಿಗರ ನಡುವೆ ಕಚೇರಿಯಲ್ಲಿ ಹೊಂದಾಣಿಕೆ ಇಲ್ಲದೇ ಇಬ್ಬರೂ ಪರಸ್ಪರ ಆರೋಪಿಸಿಕೊಂಡು ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವದು ಬೇಡ ಎಂದರು. ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಒಮ್ಮತದಿಂದ ಒತ್ತಾಯಿಸಿದರು.

ಇದೇ ಸಂದರ್ಭ ತಣ್ಣಿಮಾನಿಯ ಬಡ ಮಹಿಳೆಯೊಬ್ಬರು ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು ಜಡಿದಿರುವದು ಸರಿಯಲ್ಲ. ಅಧಿಕಾರಿಗಳು ಪ್ರತಿದಿನ ಕಚೇರಿಯಲ್ಲಿರಬೇಕು. ಸಂಬಾರ ಮಂಡಳಿಯಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕುತ್ತಿಲ್ಲ. ತಲಕಾವೇರಿಗೆ ಏಕಮುಖ ಸಂಚಾರ ಅಗಬೇಕಿದೆ. ಹೀಗೆ ಹತ್ತು ಹಲವು ಸಮಸ್ಯೆಗಳು ಕೇಳಿಬಂದವು.

11 ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆ 1 ಗಂಟೆಗೆ ಸರಿಯಾಗಿ ಪ್ರಾರಂಭಗೊಂಡು 3.30 ಗಂಟೆಗೆ ಮುಕ್ತಾಯಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮಪಂಚಾಯತಿ ಅಧ್ಯಕ್ಷೆ ಸುಮಿತ್ರಾ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ಗಿರೀಶ್ ಆಗಮಿಸಿದ್ದು ಜಿಲ್ಲಾಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್ ತಾಲೂಕು ಪಂಚಾಯಿತಿ ಸದಸ್ಯೆ ಸಂಧ್ಯಾ ಉಪಾಧ್ಯಕ್ಷೆ ಭವಾನಿ, ಪಿಡಿಒ ಅಶೋಕ್, ಪಂಚಾಯತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

- ಕುಯ್ಯಮುಡಿ ಸುನಿಲ್