ಮಡಿಕೇರಿ, ಸೆ. 22: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ಸ್ವ ಉದ್ಯೋಗ ಕೈಗೊಳ್ಳುವಂತಾಗಲು ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ನಗರದ ಬಾಲಕಿಯರ ಬಾಲಮಂದಿರದ ಪರಿಹಾರ ಕೇಂದ್ರದಲ್ಲಿ ಕಾಗದದಿಂದ ತಯಾರಿಸಲಾಗುವ ಬ್ಯಾಗ್, ಕವರ್, ಉಡುಗೊರೆ ಪದಾರ್ಥಗಳು, ಫೋಟೋ ಫ್ರೇಂ, ಆಲ್ಬಂ ಇತರ ಸಾಮಗ್ರಿಗಳನ್ನು ತಯಾರಿಸುವ ಸಂಬಂಧ ತರಬೇತಿ ನೀಡಲಾಯಿತು. ಮೈಸೂರು ಕಾಗದ ಉತ್ಪಾದನಾ ಸಂಸ್ಥೆಯ ತರಬೇತಿದಾರ ಎಸ್. ರವಿಶಂಕರ್ ಅವರು ಕಾಗದದಿಂದ ವಿವಿಧ ರೀತಿಯ ಪದಾರ್ಥಗಳನ್ನು ತಯಾರು ಮಾಡುವ ಬಗ್ಗೆ ಹಲವು ಮಾಹಿತಿ ನೀಡಿದರು. ಕಡಿಮೆ ಬಂಡವಾಳದಲ್ಲಿ ಗರಿಷ್ಠ ಆದಾಯ ಪಡೆಯುವದು ಗುಡಿ ಕೈಗಾರಿಕೆಯ ಉದ್ದೇಶವಾಗಿದೆ ಎಂದು ಹೇಳಿದರು.

ಮನೆಯಲ್ಲಿಯೇ ಕುಳಿತು ಉದ್ಯೋಗ ಪಡೆಯುವದರ ಜೊತೆಗೆ ಆದಾಯ ಗಳಿಸುವ ನಿಟ್ಟಿನಲ್ಲಿ ಸಂತ್ರಸ್ತರು ಮನಸ್ಸು ಮಾಡಬೇಕು. ಮನಸ್ಸಿದ್ದರೆ ಮಾರ್ಗ ಎಂಬಂತೆ ಕ್ರಿಯಾಶೀಲತೆ ಇದ್ದಲ್ಲಿ ಬದುಕನ್ನು ವೇಗವಾಗಿ ರೂಪಿಸಿಕೊಳ್ಳಬಹುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಾಲೋಚಕಿ ಕೆ.ಎಲ್. ಪ್ರಿಯ, ಪರಿಹಾರ ಕೇಂದ್ರದ ಅಧಿಕಾರಿ ರವಿ ಇತರರು ಇದ್ದರು.

ಸಂತ್ರಸ್ತರಿಗೆ ಆರೋಗ್ಯ ತಪಾಸಣೆ: ಅತಿವೃಷ್ಟಿಯಿಂದಾಗಿ ಮನೆ ಮಠ ಆಸ್ತಿ-ಪಾಸ್ತಿ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಮಾನಸಿಕ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆ ನಿಟ್ಟಿನಲ್ಲಿ ನಗರದ ಬಾಲಕಿಯರ ಬಾಲ ಮಂದಿರದಲ್ಲಿರುವ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಆರೋಗ್ಯ ತಪಾಸಣೆ, ಸಮಾಲೋಚನೆ ಹಾಗೂ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಮಾಡಿದರು. ಡಾ. ವಿಜಯ ಶ್ರೀನಿವಾಸ್, ಕೌನ್ಸಿಲರ್ ಶಾಹಿನ್ ತಾಜ್, ಕಾರ್ಯಕ್ರಮ ಅಧಿಕಾರಿ ದೇವಕಿ, ಭಾಗ್ಯಲಕ್ಷ್ಮಿ ಅವರು ಸಂತ್ರಸ್ತರ ಆರೋಗ್ಯ ತಪಾಸಣೆ ಮಾಡುವದರ ಜೊತೆಗೆ ಮಾನಸಿಕ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಲವು ಮಾರ್ಗದರ್ಶನ ಮಾಡಿದರು. ಜೊತೆಗೆ ಇದೇ ಸಂದರ್ಭದಲ್ಲಿ ಆರೋಗ್ಯ ಕಿಟ್‍ಗಳನ್ನು ವಿತರಿಸಿದರು.