ಗೋಣಿಕೊಪ್ಪ ವರದಿ, ಸೆ. 22: ಕೊಡಗು ಬಲಿಜ ಸಮಾಜ ವತಿಯಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜಿಸಿದ್ದ ಬಲಿಜ ಬಾಂಧವರಿಗೆ ನೆರವು ಕಾರ್ಯಕ್ರಮದಲ್ಲಿ ಸುಮಾರು 15 ಜನರಿಗೆ ಶಿಕ್ಷಣ, ವೈದ್ಯಕೀಯ ನೆರವು ನೀಡುವ ಭರವಸೆಯನ್ನು ಕರ್ನಾಟಕ ಬಲಿಜ ಸಮಾಜ ಅಧ್ಯಕ್ಷ ಡಾ. ಟಿ. ವೇಣುಗೋಪಾಲ್ ನೀಡಿದರು.

ಹಿಂದುಳಿದವರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ವೈದ್ಯಕೀಯವಾಗಿ ಸ್ಪಂದಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಥಿಕ ಹೊರೆಯಿಂದ ಶಿಕ್ಷಣಕ್ಕಾಗಿ ಸಂಕಷ್ಟ ಪಡುತ್ತಿರುವವರಿಗೆ, ಅನಾರೋಗ್ಯದಿಂದ ನರಳುತ್ತಿರುವವರಿಗೆ ಆರ್ಥಿಕ ಹಾಗೂ ಶಿಕ್ಷಣ ಕೊಡಿಸುವ ಭರವಸೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.

ಸುಮಾರು 15 ಜನರಿಗೆ ಶಿಕ್ಷಣ, ವೈದ್ಯಕೀಯ ನೆರವು ನೀಡುವ ಭರವಸೆಯನ್ನು ಕರ್ನಾಟಕ ಬಲಿಜ ಸಮಾಜ ಅಧ್ಯಕ್ಷ ಡಾ. ಟಿ. ವೇಣುಗೋಪಾಲ್ ನೀಡಿದರು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಸುಮಾರು 8 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವದಾಗಿ ಘೋಷಿಸಿದರು. ಸಮಸ್ಯೆ ಆಲಿಸಿದ ಅವರು, ಅನಾರೋಗ್ಯದಿಂದ ಬಳಲುತ್ತಿರುವ ವರಿಗೆ ಆರ್ಥಿಕ, ಹಾಗೂ ವೈದ್ಯಕೀಯ ವಾಗಿ ನೆರವು ನೀಡುವದಾಗಿ ಹೇಳಿದರು. ಪೊನ್ನಂಪೇಟೆ 7 ವರ್ಷದ ಬಾಲಕಿ ಯಶ್ಮಿತಾ ಸೇರಿದಂತೆ 8 ಮಕ್ಕಳಿಗೆ ತಮ್ಮ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡುವದಾಗಿ ಹೇಳಿದರು. ಕಿಡ್ನಿ ಕಳೆದುಕೊಂಡವರು, ಅನಾರೋಗ್ಯ ಪೀಡಿತರು ತಮ್ಮ ನೋವನ್ನು ಹಂಚಿಕೊಂಡು ಸಹಾಯದ ವಿಶ್ವಾಸ ಪಡೆದುಕೊಂಡರು. ಈ ಸಂದರ್ಭ ಸುಮಾರು 70 ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಯಿತು.

ಕರ್ನಾಟಕ ಬಲಿಜ ಸಮಾಜ ಅಧ್ಯಕ್ಷ ಡಾ. ಟಿ. ವೇಣುಗೋಪಾಲ್ ಮಾತನಾಡಿ, ಶಿಕ್ಷಣ ವಂಚಿತ ಬಲಿಜ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಉತ್ಸುಕನಾಗಿದ್ದೇನೆ. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಆಸ್ತಿ ಸಂಪಾದನೆಗಿಂತ ವಿದ್ಯೆ ಸಂಪಾದನೆಗೆ ಒತ್ತು ನೀಡಬೇಕು. ಬೆಂಗಳೂರಿನಲ್ಲಿರುವ ಬಾಲ್ಡ್‍ವಿನ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವದು ಎಂದರು.

ಸರ್ಕಾರ ಬಲಿಜ ಸಮೀಕ್ಷೆ ನಡೆಸಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಸರ್ಕಾರ ನೀಡಿರುವ 2ಎ ಮೀಸಲಾತಿ ಶಿಕ್ಷಣಕ್ಕೆ ಮಾತ್ರ ಬಳಕೆಯಾಗುತ್ತಿದೆ. ಉದ್ಯೋಗ ಪಡೆಯಲು ಮೀಸಲಾತಿ ಕಲ್ಪಿಸಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಶೇ. 80 ರಷ್ಟು ಬಲಿಜ ಬಾಂಧವರು ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವದಾಗಿ ಹೇಳಿದರು.

ಅತಿಥಿ ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿ, ಜನಾಂಗದ ಅಭಿವೃದ್ಧಿಗೆ ಜನಾಂಗದ ಹೊಣೆ ಹೊತ್ತಿರುವವರು ಈ ರೀತಿ ಸ್ಪಂದಿಸುತ್ತಿರುವದು ಉತ್ತಮ ಬೆಳೆವಣಿಗೆಯಾಗಿದೆ.

ಈ ಸಂದರ್ಭ ಕೊಡಗು ಬಲಿಜ ಸಮಾಜ ಖಜಾಂಜಿ ಲೋಕನಾಥ್, ಬೆಂಗಳೂರು ಸೌಹಾರ್ಧ ಕೃಷಿ ಪತ್ತಿನ ಸಹಕಾರ ಸಂಘ ಸಿಇಒ ರಾಜಶೇಖರ್, ಉದ್ಯಮಿ ಮುನಿರಾಜು, ಚಿತ್ರನಟ ಮುತ್ತುರಾಜ್, ತಾಲೂಕು ಗೌ. ಅಧ್ಯಕ್ಷ ನಾರಾಯಣ ಸ್ವಾಮಿ ನಾಯ್ಡು, ಮಡಿಕೇರಿ ತಾಲೂಕು ಅಧ್ಯಕ್ಷ ಮೀನಾಕ್ಷಿ, ಸದಸ್ಯ ಶ್ವೇತಾನಾಯ್ಡು ಉಪಸ್ಥಿತರಿದ್ದರು.

ವರದಿ : ಸುದ್ದಿಪುತ್ರ