ಮಡಿಕೇರಿ, ಸೆ. 22: ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪ ಸಂದರ್ಭ ಜಿಲ್ಲೆಯ ಅನೇಕ ಪತ್ರಕರ್ತರ ಕುಟುಂಬಗಳು ನಲುಗಿವೆ. ಕೆಲವೆಡೆ ಮನೆಗಳು ಪೂರ್ಣ ಧ್ವಂಸವಾಗಿದ್ದರೆ, ಇನ್ನೂ ಕೆಲವೆಡೆ ನಿವಾಸಗಳಿಗೆ ಸಂಪರ್ಕವೇ ಸಾಧ್ಯವಿಲ್ಲದಂತಾಗಿದೆ. ಸದಾ ಸುದ್ದಿಗಳ ಒತ್ತಡದಲ್ಲಿರುವ ಪತ್ರಕರ್ತರು ಇದೀಗ, ತಮ್ಮ ಕುಟುಂಬದ ರಕ್ಷಣೆಗೆ ನಿಲ್ಲುವಂತಾಗಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಡಳಿತ ಮಂಡಳಿಯು, ಸಂಘದ ಸಂತ್ರಸ್ತ ಸದಸ್ಯರ ಮನೆಗಳನ್ನು ಪರಿಶೀಲಿಸಿತು.
ಹಟ್ಟಿಹೊಳೆಯಲ್ಲಿ ವಾಸವಾಗಿರುವ ಪ್ರಜಾಸತ್ಯ ವರದಿಗಾರ ವಿನೋದ್ ಅವರಿಗೆ ಸೇರಿದ ಮನೆ ಸಂಪೂರ್ಣ ಧ್ವಂಸವಾಗಿದೆ. ಹಟ್ಟಿಹೊಳೆ ನದಿ ಪ್ರವಾಹಕ್ಕೆ ಮನೆ ಪೂರ್ಣವಾಗಿ ಕುಸಿದುಬಿದ್ದಿದೆ. ಕುಸಿದ ಮನೆಯಡಿ ಬೆಲೆಬಾಳುವ ಅನೇಕ ಸಾಮಗ್ರಿಗಳು ಸಮಾಧಿಯಾಗಿವೆ. ಮನೆಯು ವಾಸಕ್ಕೆ ಯೋಗ್ಯವಿಲ್ಲದಂತೆ ಬದಲಾಗಿದೆ. ಪೂರ್ಣ ಮನೆಯನ್ನು ಹೊಸದಾಗಿ ನಿರ್ಮಿಸದೇ ವಿಧಿಯಿಲ್ಲ. ಕುಟುಂಬವು ಇದೀಗ ಬಂಧುಗಳ ಆಶ್ರಯ ಪಡೆದಿದೆ.
ಮಕ್ಕಂದೂರಿನಲ್ಲಿರುವ ‘ಶಕ್ತಿ ’ ಉಪ ಸಂಪಾದಕ ಕುಡೆಕಲ್ ಸಂತೋಷ್ ಅವರಿಗೆ ಸೇರಿದ ಮನೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಗ್ರಾಮವು ಪ್ರಕೃತಿ ವಿಕೋಪದ ವೇಳೆ ಸಾವು ನೋವುಗಳಿಗೆ ಸಾಕ್ಷಿಯಾಗಿತ್ತು. ಸಂತೋಷ್ ಅವರ ಮನೆ ಹಾಗೂ ಅಪಾರ ಪ್ರಮಾಣದ ಕಾಫಿ ತೋಟ ಧ್ವಂಸವಾಗಿದೆ. ಮನೆಯ ಗೋಡೆಗಳು ಕುಸಿದು ಬಿದ್ದಿದ್ದು, ಸಾಮಗ್ರಿಗಳು ಮಣ್ಣು ಪಾಲಾಗಿವೆ. ಕಣ್ಣಾಯಿಸಿದಲ್ಲೆಲ್ಲ ಭೂಕುಸಿತದ ಘೋರ ದೃಶ್ಯಗಳೇ ಕಾಣುತ್ತಿವೆ. ಬಹುತೇಕ ಗ್ರಾಮಸ್ಥರು ತಮ್ಮ ಮನೆಯನ್ನು ತೊರೆದಿದ್ದಾರೆ. ಸಂತೋಷ್ ಕುಟುಂಬ ಮಡಿಕೇರಿಯಲ್ಲಿ ಆಶ್ರಯ ಪಡೆದಿದೆ.
ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಂಗೀರ್ ಪೈಸಾರಿಯಲ್ಲಿ ವಾಸವಾಗಿರುವ ನವೀನ್ ಡಿಸೋಜಾ ಅವರ ಕುಟುಂಬದ ಕಥೆಯೇ ಬೇರೆ. ಸುತ್ತಮುತ್ತಲೆಲ್ಲ ಭೂಕುಸಿತವೇ ಕಂಡುಬರುವ ಪರಿಸರದ ಮಧ್ಯೆ ಈ ಮನೆ ಉಳಿದುಕೊಂಡಿದೆ. ವಾಸಕ್ಕೆ ಯೋಗ್ಯವಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಮನೆಯನ್ನು ಸಂಪರ್ಕಿಸಲು ಕಿ.ಮೀ.ಗಟ್ಟಲೆ ಏರಿಳಿದು ನಡೆಯಬೇಕು. ರಸ್ತೆಯೇ ನಾಪತ್ತೆಯಾಗಿರುವದರಿಂದ ವಾಹನ ಸಂಪರ್ಕ ಸಾಧ್ಯವಾಗುತ್ತಿಲ್ಲ. ವಯೋವೃದ್ಧ ಪೋಷಕರು ಮುಖ್ಯರಸ್ತೆ ಕ್ರಮಿಸಬೇಕಾದರೆ ಏದುಸಿರು ಬಿಡದೇ ವಿಧಿಯಿಲ್ಲ. ವಿಜಯವಾಣಿ ಛಾಯಾಗ್ರಾಹಕ, ಕಾಟಕೇರಿ ಗ್ರಾಮದ ಕೆ.ಎಸ್. ಲೋಕೇಶ್ ಅವರ ಕುಟುಂಬ ಕೂಡಾ ಕಣ್ಣೀರಿನಲ್ಲಿದೆ. ಲೋಕೇಶ್ ಅವರ ಮನೆಯು ಭಾರೀ ಮಳೆಗೆ ತುತ್ತಾಗಿ ನೆಲಕ್ಕೊರಗಿದೆ. ಬಹುತೇಕ ಹಾನಿಗೊಂಡಿರುವ ಮನೆಯಲ್ಲಿ ಆತಂಕದಿಂದಲೇ ಕುಟುಂಬ ಕಾಲ ನೂಕುತ್ತಿದೆ.
ಮಡಿಕೇರಿಯ ಮಂಗಳಾದೇವಿ ನಗರದಲ್ಲಿರುವ ‘ಶಕ್ತಿ’ ಉಪ ಸಂಪಾದಕ ಉಜ್ವಲ್ ರಂಜಿತ್ ಅವರ ಮನೆಯ ಹಿಂಬದಿ ಭಾರೀ ಭೂಕುಸಿತವಾಗಿದ್ದು, ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ. ಆತಂಕದಿಂದಾಗಿ ಕುಟುಂಬವು ಬಾಡಿಗೆ ಮನೆಯನ್ನು ಆಶ್ರಯಿಸಿದೆ. ಮನೆಯೊಳಗಿದ್ದ ಅಪಾರ ಸಾಮಗ್ರಿಗಳು ಮಣ್ಣುಪಾಲಾಗಿವೆ.
ಆಂದೋಲನ ಜಿಲ್ಲಾ ವರದಿಗಾರ ಎಂ.ಎನ್. ನಾಸಿರ್ ಅವರ ಮನೆಗೂ ಹಾನಿಯಾಗಿದೆ. ಮಡಿಕೇರಿಯ ಹಿಲ್ ರಸ್ತೆಯ ಮಕಾನ್ ಗಲ್ಲಿಯಲ್ಲಿರುವ ಈ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದಿದೆ. ಮಡಿಕೇರಿಯ ಇಂದಿನಾಗರದಲ್ಲಿ ವಾಸವಾಗಿರುವ ಸುದ್ದಿ ಟಿವಿ ಕ್ಯಾಮರಾಮ್ಯಾನ್ ಆರ್.ಆರ್. ಮನೋಜ್ ಅವರ ಮನೆ ಅಪಾಯದಂಚಿನಲ್ಲಿದೆ. ಪ್ರಕೃತಿ ವಿಕೋಪದಿಂದ ಮನೆ ಬಿರುಕು ಬಿಟ್ಟಿದೆ. ಇದೇ ವೇಳೆ ಸಂಘದ ಆಡಳಿತ ಮಂಡಳಿಯು, ಮಳೆಯಿಂದ ಸಾಮಗ್ರಿಗಳು ಹಾನಿಯಾಗಿರುವ ಚಿತ್ತಾರ ವಾಹಿನಿ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪತ್ರಕರ್ತರ ಸಂಘದ ಆಡಳಿತ ಮಂಡಳಿಯು ಈ ಎಲ್ಲಾ ಮನೆಗಳ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ, ವರದಿ ತಯಾರಿಸಿದೆ. ರಾಜ್ಯ ಪತ್ರಕರ್ತರ ಸಂಘದ ಮೂಲಕ ಸಂತ್ರಸ್ತರಿಗೆ ನೆರವು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಪರಿಶೀಲನೆ ವೇಳೆ ಕಟ್ಟಡಗಳ ತಾಂತ್ರಿಕ ಪರಿಣತಿ ಹೊಂದಿರುವ ಕದೀರ್ ಅವರು ನೆರವು ನೀಡಿದರು. ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ರಾಜ್ಯ ಸಮಿತಿ ಸದಸ್ಯ ಎ.ಆರ್. ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಖಜಾಂಚಿ ಆರುಣ್ ಕುಮಾರ್ ಹಾಗೂ ಕಾರ್ಯದರ್ಶಿ ಆನಂದ್ ಕೊಡಗು ಪರಿಶೀಲನೆ ವೇಳೆ ಹಾಜರಿದ್ದರು.