ಇದ್ದ 11.50 ಎಕರೆ ಗದ್ದೆ ಹಾಗೂ ತೋಟದಲ್ಲಿ ಕೃಷಿ ಮಾಡಿಕೊಂಡು, 90 ವರ್ಷದ ಹಳೆಯ ಮನೆಯಲ್ಲಿ ಕೂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ಕುಟ್ಟಂಡ ಪೊನ್ನಮ್ಮ ಅವರ ಕುಟುಂಬ ಮಹಾಮಳೆಯ ಹೊಡೆತಕ್ಕೆ ಸಿಲುಕಿ ದಿಕ್ಕಾಪಾಲಾಗಿದೆ.
ತನ್ನ ಈರ್ವರು ಪುತ್ರರು, ಸೊಸೆಯಂದಿರೊಂದಿಗೆ ಪೊನ್ನಮ್ಮ ಅವರ ಜೀವನ ಕೃಷಿಯಿಂದಲೇ ಸಾಗುತ್ತಿತ್ತು. ಆದರೆ ಕಳೆದ ಆ. 16 ರಂದು ಉಂಟಾದ ಪ್ರಾಕೃತಿಕ ವಿಕೋಪ ಇವರ ಕೃಷಿ ಪ್ರದೇಶವನ್ನೆಲ್ಲಾ ಆಹುತಿ ಪಡೆದಿದ್ದು, 4.50 ಏಕರೆ ಕಾಫಿ ತೋಟ, 8.50 ಏಕರೆ ಗದ್ದೆ ಸಂಪೂರ್ಣ ನಾಶವಾಗಿದೆ. ಕಾಫಿ ತೋಟದಲ್ಲಿದ್ದ ಕಾಫಿ ಗಿಡ, ಮರಗಳು, ಕರಿಮೆಣಸು ಬಳ್ಳಿಗಳು ಕೊಚ್ಚಿಕೊಂಡು ಹೋಗಿದ್ದರೆ, ಗದ್ದೆಯಲ್ಲಿ ಮಣ್ಣು ಮಿಶ್ರಿತ ಮರಳು ನಿಂತು ಮರುಭೂಮಿಯಾಗಿದೆ. ನಾಟಿ ಮಾಡಿದ್ದ ಗದ್ದೆ ಸಂಪೂರ್ಣ ನಾಶವಾಗಿದೆ.
ಕಳೆದ ಆ. 16 ರಂದು ಬೆಳಿಗ್ಗೆ 10.30ಕ್ಕೆ ಮನೆಯ ಹಿಂಭಾಗದ ಗುಡ್ಡ ಭಾರೀ ಪ್ರಮಾಣದಲ್ಲಿ ಕುಸಿದು, ಕಾವೇರಪ್ಪ, ದೇವಯ್ಯ, ರೀತ್ಕುಮಾರ್ ಅವರ ತೋಟ, ಮನೆಯನ್ನು ಆಪೋಷನ ತೆಗೆದುಕೊಂಡು ಹರಿದ ಪರಿಣಾಮ ಪೊನ್ನಮ್ಮ ಅವರ ತೋಟ, ಗದ್ದೆ ಮಾಯವಾಗಿದೆ. ಇದರೊಂದಿಗೆ 90 ವರ್ಷದ ಹಿಂದೆ ನಿರ್ಮಿ ಸಿದ್ದ ಬೃಹತ್ ಹೆಂಚಿನ ಮನೆಯೂ ಸಹ ಭೂ ಸ್ಫೋಟಕ್ಕೆ ನಡುಗಿದ್ದು, ಹಿಂಬದಿಯ ಗೋಡೆಗಳು ಬಿರುಕುಬಿಟ್ಟಿವೆ.
ಅಂದು ಮನೆ ಬಿಟ್ಟು ತೆರಳಿದ್ದ ಕುಟುಂಬಸ್ಥರು ಇಂದಿಗೂ ಮನೆ ಕಡೆ ವಾಪಸ್ ಬಂದಿಲ್ಲ. ಪೊನ್ನಮ್ಮ ಅವರು ಆಗಾಗ್ಗೆ ಮನೆ ಬಳಿ ಬಂದು ನೋಡಿಕೊಂಡು ತೆರಳುತ್ತಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಈ ಮನೆ ವಾಸಕ್ಕೆ ಯೋಗ್ಯವಾಗಿಲ್ಲ. ನೀವು ಬೇರೆಲ್ಲಾದರೂ ಆಶ್ರಯ ಪಡೆಯಿರಿ ಎಂದು ಹೇಳಿದ್ದು, ಬಿಡಿಗಾಸೂ ಇಲ್ಲದೇ ಬರಿಗೈಯಲ್ಲಿರುವ ಪೊನ್ನಮ್ಮ ಅವರು ಎಲ್ಲಿಗೆ ಹೋಗುವದು ಎಂದು ಪ್ರಶ್ನಾರ್ಥಕ ನೋಟ ಬೀರುತ್ತಿದ್ದಾರೆ.
5 ಕುಟುಂಬಕ್ಕೆ ನೆರವಾಗಿದ್ದರು: ಆ. 16 ರಂದು ಉಂಟಾದ ಜಲಪ್ರಳಯದಲ್ಲಿ ಸಿಲುಕಿದ್ದ ಸುಮಾರು 5 ಕುಟುಂಬವನ್ನು ಇದೇ ಪೊನ್ನಮ್ಮ ಅವರು ರಕ್ಷಿಸಿದ್ದರು. ಬೆಟ್ಟ ಕುಸಿಯುತ್ತಿದ್ದಂತೆ ಮನೆಯ ಹಿಂಬದಿಯಿರುವ ದೇವಯ್ಯ, ಪೂವಯ್ಯ, ಪಾರ್ವತಿ ಅವರುಗಳಿಗೆ ಮೊಬೈಲ್ ಕರೆ ಮಾಡಿ ತಕ್ಷಣ ಮನೆಯಿಂದ ಹೊರಬರುವಂತೆ ತಿಳಿಸಿದ್ದರು. ಇದರೊಂದಿಗೆ ಪೂಣಚ್ಚ, ಜ್ಯೋತಿ ಅವರುಗಳ ಕುಟುಂಬಸ್ಥರಿಗೂ ನೆರವಾಗಿದ್ದರು. ಈ ಸಮಯದಲ್ಲೇ ಇವರ ಮನೆಯೂ ನಡುಗಿದ್ದು, ಎಲ್ಲರೊಂದಿಗೆ ಗರಗಂದೂರಿಗೆ ತೆರಳಿದ್ದರು. ನಂತರ ಮರಂದೋಡದ ಎಂ.ಚಿಣ್ಣಪ್ಪ ಅವರ ಮನೆಯಲ್ಲಿ ಕೆಲ ದಿನ ತಂಗಿದ್ದರು.
ಬದಲಿ ಜಾಗ-ಉದ್ಯೋಗ ಕೊಡಲಿ: ಪೊನ್ನಮ್ಮ ಅವರಿಗೆ ಇದ್ದ 11.50 ಎಕರೆ ಕೃಷಿ ಭೂಮಿ ಸಂಪೂರ್ಣ ನಾಶವಾಗಿದ್ದು, ಮುಂದಿನ ಭವಿಷ್ಯಕ್ಕೆ ಗಾಡಾಂಧಕಾರ ಮೂಡಿದೆ. ಇರುವ ಈರ್ವರು ಮಕ್ಕಳೂ ಸಹ ಕೃಷಿಯನ್ನೇ ನಂಬಿಕೊಂಡಿದ್ದರು. ಇದೀಗ ಕೃಷಿ ಭೂಮಿ ಸಂಪೂರ್ಣ ನಾಶವಾಗಿದ್ದು, ಇಬ್ಬರು ಮಕ್ಕಳಿಗೆ ತಲಾ 5 ಎಕರೆ ಬದಲಿ ಕೃಷಿ ಭೂಮಿ ನೀಡಬೇಕು. ಮೊದಲನೇ ಸೊಸೆ ಶ್ವೇತಾ ಬಿ.ಕಾಂ., ದ್ವಿತೀಯ ಸೊಸೆ ಪೂರ್ಣ ಬಿಸಿಎ ವ್ಯಾಸಂಗ ಮಾಡಿದ್ದು, ಇಬ್ಬರಿಗೆ ಯಾವದಾದರೂ ಸಂಸ್ಥೆಯಲ್ಲಿ ಉದ್ಯೋಗ ನೀಡಿದರೆ ಮತ್ತೆ ಬದುಕು ಕಟ್ಟಿಕೊಳ್ಳಬಹುದು ಎಂದು ಪೊನ್ನಮ್ಮ ಅವರು ಮನವಿ ಮಾಡಿದ್ದಾರೆ.
ದಿಕ್ಕಾಪಾಲಾದ ಕುಟುಂಬ: ಪೊನ್ನಮ್ಮ ಅವರು ತಮ್ಮ ಪ್ರಥಮ ಪುತ್ರ ಸುದೀಪ್, ದ್ವಿತೀಯ ಪುತ್ರ ಪ್ರದೀಪ್ ಮತ್ತು ಸೊಸೆಯಂದಿರೊಂದಿಗೆ ನೆಲೆಸಿದ್ದು, ಇದೀಗ ಈರ್ವರಲ್ಲಿ ಓರ್ವ ಪುತ್ರ ಗರಗಂದೂರು, ಮತ್ತೋರ್ವ ಪುತ್ರ ಪೊನ್ನಂಪೇಟೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದಾರೆ. ಇಗ್ಗೋಡ್ಲಿನತ್ತ ಇವರು ಬರುತ್ತಿಲ್ಲ. ಮಹಾಮಳೆಗೆ ಕುಟುಂಬವೂ ದಿಕ್ಕಾಪಾಲಾಗಿದೆ.
ಮನುಷ್ಯರಿಗೆ ಇಂತಹ ಕಷ್ಟ ಬರಬಾರದು. ನಮ್ಮ ಮನೆಯೂ ಮುರಿದು ಬೀಳುವ ಹಂತದಲ್ಲಿದೆ. ನಮಗೆ ಯಾವದೇ ಸಹಕಾರ ಸಿಗುತ್ತಿಲ್ಲ. 10 ರೂಪಾಯಿಗೂ ಇನ್ನೊಬ್ಬರಲ್ಲಿ ಬೇಡುವ ಸ್ಥಿತಿ ಬಂದಿದೆ. ಆಸ್ತಿಯನ್ನು ಇಬ್ಬರು ಮಕ್ಕಳಿಗೆ ಪಾಲು ಮಾಡಿ ಕೊಡುವ ಎಂದು ನೆನೆಸಿದ್ದೆ. ಇದೀಗ ಯಾವ ಆಸ್ತಿಯೂ ಇಲ್ಲವಾಗಿದೆ. ಸರ್ಕಾರದೊಂದಿಗೆ ಸಹೃದಯ ಸಮಾಜವೇ ನಮ್ಮ ಕೈಹಿಡಿಯಬೇಕು ಎಂದು ಪೊನ್ನಮ್ಮ (ಮೊ:7996791581) ಅವರು ಕಣ್ಣೀರಿನೊಂದಿಗೆ ಮನವಿ ಮಾಡಿದ್ದಾರೆ.
- ವಿಜಯ್ ಹಾನಗಲ್